×
Ad

ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರ ಆರೋಪ: ಸಿಎಂ, ಆರೋಗ್ಯ ಸಚಿವರ ರಾಜೀನಾಮೆಗೆ ಆಪ್ ಒತ್ತಾಯ

Update: 2020-07-23 17:50 IST

ಬೆಂಗಳೂರು, ಜು. 23: ಕೊರೋನ ಸೋಂಕು ನಿಯಂತ್ರಣ ಸಂಬಂಧದ ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರದ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.

ಕೊರೋನ ಸೋಂಕಿನ ಸಂದಿಗ್ಧ ಸಮಯದಲ್ಲಿ ರಾಜ್ಯ ಸರಕಾರವು ವೈದ್ಯಕೀಯ ಉಪಕರಣಗಳು ಹಾಗೂ ರೋಗ ನಿಯಂತ್ರಣ ಸಾಮಗ್ರಿಗಳ ಖರೀದಿಯಲ್ಲಿ 2ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಆಪ್ ಪಕ್ಷವು ಪ್ರಾರಂಭದಿಂದಲೂ ಕೋರೋನ ನಿಯಂತ್ರಣದ ವಿಷಯದಲ್ಲಿ ಸರಕಾರ ಹಾಗೂ ಬಿಬಿಎಂಪಿ ಅವ್ಯವಹಾರ ನಡೆಸಿದೆ ಎಂದು ಆರೋಪ ಮಾಡುತ್ತಲೇ ಇದೆ.

ಕಳಪೆ ಪಿಪಿಇ ಕಿಟ್, ವೆಂಟಿಲೇಟರ್ ಗಳು, ಮಾಸ್ಕ್, ಸ್ಯಾನಿಟೈಸರ್, ಪಲ್ಸ್ ಆಕ್ಸಿಮೀಟರ್ ಗಳು ಸೇರಿದಂತೆ ಹಲವು ಸಾಮಗ್ರಿಗಳ ಖರೀದಿ ವಿಚಾರದಲ್ಲಿ ಎರಡು, ಮೂರು ಪಟ್ಟು ಹೆಚ್ಚಿನ ಬೆಲೆಯನ್ನು ನೀಡಿ ಖರೀದಿಸಿರುವುದು ಅಲ್ಲದೆ, ಅವ್ಯವಹಾರವನ್ನು ಎಸಗಿರುವುದು ಆರೋಗ್ಯ ಸಚಿವ ಶ್ರೀರಾಮುಲು ಅವರ ಮಾತಿನಲ್ಲೇ ಸ್ಪಷ್ಟವಾಗುತ್ತಿದೆ. ಪೂರೈಕೆದಾರರು ಹೆಚ್ಚಿನ ಬೆಲೆಯ ಬೇಡಿಕೆ ಇಟ್ಟಿದ್ದರಿಂದ ಕೊಂಡುಕೊಳ್ಳುವ ಅನಿವಾರ್ಯತೆ ಬಂದಿದೆ ಎಂಬ ಅಸಹಾಯಕ ಉತ್ತರವನ್ನು ಸಚಿವರು ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಎಎಪಿ ಟೀಕಿಸಿದೆ.

ಸರಕಾರವು ಹಾಗೂ ಅಧಿಕಾರಿಗಳು ನೇರವಾಗಿ ಪೂರೈಕೆದಾರರೊಂದಿಗೆ ಅನೈತಿಕವಾಗಿ ಕೈಜೋಡಿಸಿ ಸಾವಿರಾರು ಕೋಟಿ ರೂ.ಗಳನ್ನು ಮಹಾದುರಂತದ ಸಮಯದಲ್ಲಿ ಲಪಟಾಯಿಸಿರುವುದು ಸ್ಪಷ್ಟ. ಆರೋಗ್ಯದ ತುರ್ತು ಪರಿಸ್ಥಿತಿಯಲ್ಲಿ ಜನತೆಯ ಆರೋಗ್ಯ ದೃಷ್ಟಿಗಾಗಿ ಟೆಂಡರ್ ಪ್ರಕ್ರಿಯೆಗಳಲ್ಲಿ ಪಾರದರ್ಶಕ ಕಾಯಿದೆಯನ್ನು ತೆಗೆದು ಹಾಕುವ ಮಹತ್ತರ ಉದ್ದೇಶವನ್ನೇ ದುರ್ಬಳಕೆ ಮಾಡಿಕೊಂಡು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವು ಅಮಾನುಷ ರೀತಿಯಲ್ಲಿ ಹಣ ಮಾಡುವ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವುದು ಕಳವಳಕಾರಿ ಎಂದು ಆಪ್ ಬೇಸರ ವ್ಯಕ್ತಪಡಿಸಿದೆ.

ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಇದರ ನೈತಿಕ ಹೊಣೆಹೊತ್ತು ಕೂಡಲೇ ರಾಜೀನಾಮೆಯನ್ನು ನೀಡಿ ಹೈಕೋರ್ಟಿನ ಹಾಲಿ ನ್ಯಾಯಾಧೀಶರಿಂದ ವೈದ್ಯಕೀಯ ಉಪಕರಣ ಖರೀದಿ ಸಂಬಂಧ ತನಿಖೆಯನ್ನು ನಡೆಸಬೇಕು. ಈ ಸಂಬಂಧ ಆಮ್ ಆದ್ಮಿ ಪಾರ್ಟಿಯಿಂದ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಿಗೆ ದೂರನ್ನು ನೀಡಲಾಗುವುದು ಎಂದು ಆಪ್ ಪ್ರಕಟಣೆಯಲ್ಲಿ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News