ಸರಕಾರದ ಆಡಳಿತ ವೈಫಲ್ಯದಿಂದಾಗಿ ಹಿರಿಯ ನಾಗರಿಕರಿಗೆ ಶೋಷಣೆ: ರೇಖಾ ಹುಲಿಯಪ್ಪಗೌಡ
ಚಿಕ್ಕಮಗಳೂರು, ಜು.23: ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನಗಳ ಬಿಡುಗಡೆಗೆ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ವಿಳಂಬ ಮಾಡುತ್ತಿದ್ದು, ಕಳೆದ 8 ತಿಂಗಳುಗಳಿಂದ ಹಿರಿಯ ನಾಗರಿಕರೂ ಸೇರಿದಂತೆ ಫಲಾನುಭವಿಗಳನ್ನು ಸತಾಯಿಸುತ್ತಿದೆ. ಸರಕಾರದ ಈ ನಿರ್ಲಕ್ಷ್ಯ ಧೋರಣೆಯಿಂದಾಗಿ ಫಲಾನುಭವಿಗಳು ಪ್ರತಿದಿನ ತಾಲೂಕು ಕಚೇರಿಗಳಿಗೆ ಸುಮ್ಮನೆ ಅಲೆದಾಡುವಂತಾಗಿದೆ ಎಂದು ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಆರೋಪಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನಗಳನ್ನು ಪಡೆಯುತ್ತಿರುವ ಫಲಾನುಭವಿಗಳಿದ್ದಾರೆ. ಈ ಪೈಕಿ ಕೆಲ ಹಿರಿಯ ನಾಗರಿಕರು, ಅಂಗವಿಕಲರು, ವಿಧವೆಯರಿಗೆ ಸರಕಾರದ ಈ ಯೋಜನೆಗಳ ಹಣವೇ ಜೀವನಾಧಾರವಾಗಿದೆ. ಆದರೆ ಜಿಲ್ಲಾಡಳಿತ ವೇತನ ಬಿಡುಗಡೆಗೆ ಕಳೆದ 8 ತಿಂಗಳುಗಳಿಂದ ಯಾವುದೇ ಕ್ರಮವಹಿಸಿಲ್ಲ. ಪರಿಣಾಮ ಫಲಾನುಭವಿಗಳು ತೀವ್ರ ಸಂಕಷ್ಟದಲ್ಲಿ ದಿನಕಳೆಯುವಂತಾಗಿದೆ. ಕೊರೋನ ಸೋಂಕಿನ ಪರಿಣಾಮ ಜಾರಿ ಮಾಡಲಾದ ಲಾಕ್‍ಡೌನ್‍ನಿಂದಾಗಿ ಈ ಫಲಾನುಭವಿಗಳ ಜೀವನ ಮೊದಲೇ ಸಂಕಷ್ಟಕ್ಕೆ ತಲುಪಿದೆ. ಇದೀಗ ಸರಕಾರ ಹಿರಿಯ ನಾಗರಿಕರು, ಅಂಗವಿಕಲರು, ವಿಧವೆಯರಿಗೆ ಈ ಯೋಜನೆಗಳ ಹಣ ನೀಡದೇ ಸತಾಯಿಸುತ್ತಿದೆ ಎಂದು ದೂರಿದರು.
ಈ ಯೋಜನೆಗಳ ಹಣಕ್ಕಾಗಿ ಚಿಕ್ಕಮಗಳೂರು ತಾಲೂಕು ಸೇರಿದಂತೆ ಪ್ರತಿದಿನ ಜಿಲ್ಲೆಯ ವಿವಿಧ ತಾಲೂಕು ಕಚೇರಿಗಳಿಗೆ ನೂರಾರು ಹಿರಿಯ ನಾಗರಿಕರು, ಅಂಗವಿಕಲರು ವಿಧವೆಯರು ಸೌಲಭ್ಯ ಕೋರಿ ಅಲೆದಾಡುತ್ತಿದ್ದಾರೆ. ಅಧಿಕಾರಿಗಳು ಇವರಿಗೆ ಇಲ್ಲದ ಸಬೂಬು ಹೇಳಿ ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಜಿಲ್ಲೆಯಲ್ಲಿನ ವಿವಿಧ ತಾಲೂಕು ವ್ಯಾಪ್ತಿಯಲ್ಲಿನ ದೂರದ ಗ್ರಾಮಗಳಿಂದ ತಾಲೂಕು ಕಚೇರಿಗೆ ಅಲೆಯುತ್ತಿರುವ ಈ ಫಲಾನುಭವಿಗಳು ಹಣ, ಸಮಯ ವ್ಯರ್ಥ ಮಾಡಿಕೊಂಡು ಅಲೆದಾಡುತ್ತಿದ್ದಾರಾದರೂ ಸೌಲಭ್ಯಗಳು ಸಿಗುತ್ತಿಲ್ಲ ಎಂದು ದೂರಿದರು.
ಸದ್ಯ ಜಿಲ್ಲೆಯಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇಂತಹ ಸಂದರ್ಭಗಳಲ್ಲಿ ಸೋಂಕು ಹಿರಿಯ ನಾಗರಿಕರಿಗೆ ತಗುಲಿದರೆ ಅವರು ಬದುಕುವುದೇ ಕಷ್ಟ. ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು ಸುಮ್ಮನೆ ಕಚೇರಿಗಳಿಗೆ ಅಲೆದಾಡಬಾರದು. ಮನೆಗಳಿಂದ ಹೊರಗೆ ಬರಬಾರದು ಎಂದು ಈ ಹಿಂದೆಯೇ ಆದೇಶ ನೀಡಿದೆ. ಆದರೆ ಜಿಲ್ಲಾಡಳಿತ ಮತ್ತು ಸರಕಾರದ ಆಡಳಿತದ ವೈಫಲ್ಯದ ಫಲವಾಗಿ ಹಿರಿಯ ನಾಗರಿಕರು ವೃದ್ಧಾಪ್ಯ ವೇತನಕ್ಕಾಗಿ ಕಚೇರಿಗಳಿಗೆ ಅಲೆಯುವಂತಾಗಿದೆ. ಸರಕಾರದ ಈ ಕಾರ್ಯವೈಖರಿಯಿಂದಾಗಿ ಜಿಲ್ಲೆಯಲ್ಲಿ ಸಾವಿರಾರು ಫಲಾನುಭವಿಗಳ ಬದುಕು ಅತಂತ್ರಗೊಂಡಿದೆ ಎಂದು ರೇಖಾ ಹುಲಿಯಪ್ಪಗೌಡ ಟೀಕಿಸಿದರು.
ಸೌಲಭ್ಯಗಳಿಗಾಗಿ ತಾಲೂಕು ಕಚೇರಿಗಳಿಗೆ ಅಲೆಯುತ್ತಿರುವ ಫಲಾನುಭವಿಗಳಿಗೆ ಕಚೇರಿ ಸಿಬ್ಬಂದಿ ಸರಿಯಾದ ಮಾಹಿತಿ ನೀಡುತ್ತಿಲ್ಲ. ಫಲಾನುಭವಿಗಳು ತಾಲೂಕು ಕಚೇರಿ ಅಧಿಕಾರಿಗಳನ್ನು ವಿಚಾರಿಸಿದರೇ, ಈ ಸೌಲಭ್ಯಗಳ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು ಸರಕಾರ ಆದೇಶ ನೀಡಿದ್ದು, ಅದರಂತೆ ಫಲಾನುಭವಿಗಳ ಮಾಹಿತಿ, ಆಧಾರ್ ಕಾರ್ಡ್‍ಗಳನ್ನು ಲಿಂಕ್ ಮಾಡುವ ಕೆಲಸ ನಡೆಯುತ್ತಿರುವುದರಿಂದ ಹಣ ಬಿಡುಗಡೆ ವಿಳಂಬವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಹಿರಿಯ ನಾಗರಿಕರನ್ನು ಕಚೇರಿಗೆ ಅಲೆದಾಡಿಸುವುದರಿಂದ ಇವರಿಗೂ ಸೋಂಕು ತಗುಲುವ ಸಾಧ್ಯತೆ ಇದೆ. ಅಧಿಕಾರಿಗಳು ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿದ ಮಾಹಿತಿ ಸಂಗ್ರಹಿಸಲು ಕ್ರಮವಹಿಸಬೇಕು. ಈ ಸಮಸ್ಯೆ ಇಡೀ ರಾಜ್ಯಕ್ಕೆ ಸಂಬಂಧಿಸಿರುವುದರಿಂದ ಈ ಮಾಹಿತಿಗಳ ಸಂಗ್ರಹಕ್ಕೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ನಿಗದಿತ ಕಾಲಾವಧಿಯ ಗಡುವು ನೀಡಿ ಸರಕಾರವೇ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತ್ತೀಚೆಗೆ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಆದರೆ ಇನ್ನೂ ಸೋಂಕು ಪರೀಕ್ಷೆಯ ಲ್ಯಾಬ್ ನಿರ್ಮಾಣ ಕೆಲಸ ಪೂರ್ಣಗೊಂಡಿಲ್ಲ. ಲ್ಯಾಬ್ ಇಲ್ಲದ ಪರಿಣಾಮ ಸ್ವಾಬ್ ಪರೀಕ್ಷೆಯ ವರದಿ ತಡವಾಗಿ ಬರುತ್ತಿದ್ದು, ಸೋಂಕು ಹೆಚ್ಚಲು ಕಾರಣವಾಗಿದೆ. ಅಲ್ಲದೇ ಕ್ವಾರಂಟೈನ್ ಕೇಂದ್ರ, ಕೊರೋನ ಚಿಕಿತ್ಸಾ ಘಟಕಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸದೇ ಇರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿದ್ದು, ಜಿಲ್ಲಾಡಳಿತ ಸೋಂಕಿತರಿಗೆ ಸೌಲಭ್ಯ ನೀಡುವ ನಿಟ್ಟಿನಲ್ಲಿ ಸರಕಾರದ ಮಾರ್ಗಸೂಚಿಗಳಂತೆಯೇ ಸೌಲಭ್ಯಗಳನ್ನು ಕಲ್ಪಿಸಬೇಕು. ಕೊರೋನ ಹೆಚ್ಚುತ್ತಿರುವ ಸಂದರ್ಭ ಜಿಲ್ಲಾಡಳಿತ ವೈದ್ಯರು, ನರ್ಸ್ ಗಳು, ಇತರ ಸಿಬ್ಬಂದಿಯನ್ನು ಸೀಮಿತ ಅವಧಿಗೆ ನೇಮಕ ಮಾಡಲು ಮುಂದಾಗಿರುವುದು ಸರಿಯಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಖಾಯಂ ಆಗಿ ನೇಮಿಸಿಕೊಳ್ಳಬೇಕೆಂದು. ಆಶಾ ಕಾರ್ಯಕರ್ತೆರ ವೇತನ ಹೆಚ್ಚಳ ಮಾಡಿ ಅವರು ಸೇವೆಗೆ ತೊಡಗಿಸಿಕೊಳ್ಳುವಂತೆ ರಾಜ್ಯ ಸರಕಾರ ಕ್ರಮಕೈಗೊಳ್ಳಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಮುಖಂಡರಾದ ಸುರೇಖಾ ಸಂಪತ್, ನಗೀನಾ ಹಾಗೂ ಲಕ್ಯಾ ಗ್ರಾಪಂ ಮಾಜಿ ಅಧ್ಯಕ್ಷ ಕಾಂತರಾಜ್ ಉಪಸ್ಥಿತರಿದ್ದರು.
ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗಲಿಕಲರಿಗೆ ನೀಡುತ್ತಿರುವ ಸಹಾಯಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಈ ಯೋಜನೆಗೆ ಯಾವುದೇ ತಿದ್ದುಪಡಿ ಮಾಡದೇ ಹಳೇ ವಿಧಾನದಲ್ಲೇ ಸೌಲಭ್ಯವನ್ನು ಶೀಘ್ರ ಬಿಡುಗಡೆ ಮಾಡಬೇಕು. ತಪ್ಪಿದಲ್ಲಿ ಜಿಲ್ಲೆಯ ಪ್ರತೀ ಹೋಬಳಿ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಫಲಾನುಭವಿಗಳೊಂದಿಗೆ ಪ್ರತಿಭಟನೆ ನಡೆಸಲಾಗುವುದು.
- ಕಾಂತರಾಜ್, ಗ್ರಾಪಂ ಮಾಜಿ ಅಧ್ಯಕ್ಷ, ಲಕ್ಯಾ