ಆ್ಯಂಬುಲೆನ್ಸ್ ಚಾಲಕರಿಗೆ ಟ್ರಾಫಿಕ್ ಸಹಾಯವಾಣಿ ನಂಬರ್ ತಲುಪಿಸಿ: ಹೈಕೋರ್ಟ್ ಆದೇಶ

Update: 2020-07-23 12:29 GMT

ಬೆಂಗಳೂರು, ಜು.23: ಬೆಂಗಳೂರು ನಗರದ ಟ್ರಾಫಿಕ್‍ನಲ್ಲಿ ಆ್ಯಂಬುಲೆನ್ಸ್ ಗಳು ಸಿಕ್ಕಿ ಹಾಕಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ಆ್ಯಂಬುಲೆನ್ಸ್ ಚಾಲಕರಿಗೆ ಟ್ರಾಫಿಕ್ ಸಹಾಯವಾಣಿ ಸಂಖ್ಯೆ ತಲುಪಿಸಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ.

ಈ ಕುರಿತು ಗಿರೀಶ್ ಭಾರಧ್ವಾಜ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಇದೇ ವೇಳೆ ಬೆಂಗಳೂರು ಸಂಚಾರಿ ಪೊಲೀಸರು ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿ ಈಗಾಗಲೇ ಮೂರು ಟೋಲ್ ಫ್ರೀ ನಂಬರ್ ಬಿಡುಗಡೆ ಮಾಡಲಾಗಿದೆ. ಹೆಲ್ಪ್ ಲೈನ್ ನಂಬರ್ ಜೊತೆಗೆ ಆ್ಯಂಬುಲೆನ್ಸ್ ಕಂಟ್ರೋಲ್ ಸೆಂಟರ್ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಟೆಂಡರ್ ಅಪ್ರೂವಲ್‍ಗೆ ಆರ್ಥಿಕ ಇಲಾಖೆಗೆ ಕಳುಹಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ನಗರದ ಎಲ್ಲ ಆ್ಯಂಬುಲೆನ್ಸ್ ಚಾಲಕರಿಗೆ ಹೆಲ್ಪ್ ಲೈನ್ ನಂಬರ್ ತಲುಪಿಸಿ. ಪ್ರತಿ ಆ್ಯಂಬುಲೆನ್ಸ್ ನ ಚಲನವಲನ ಟ್ರಾಫಿಕ್ ಪೊಲೀಸರಿಗೆ ತಿಳಿಸಬೇಕು. ತಕ್ಷಣ ಆ್ಯಂಬುಲೆನ್ಸ್ ಕಂಟ್ರೋಲ್ ಸೆಂಟರ್ ಟೆಂಡರ್ ಪ್ರಕ್ರಿಯೆ ಮುಗಿಸಿ ಎಂದು ರಾಜ್ಯ ಸರಕಾರಕ್ಕೆ ಸೂಚನೆ ನೀಡಿತು.

ಬಿಬಿಎಂಪಿ ಬಳಿ ಈಗ ಆ್ಯಂಬುಲೆನ್ಸ್ ನಂಬರ್ ಗಳ ಪಟ್ಟಿ ಇದೆಯೇ ಎಂದು ಪ್ರಶ್ನಿಸಿದ ನ್ಯಾಯಪೀಠವು ಆ ಎಲ್ಲ ಚಾಲಕರಿಗೆ ಸಹಾಯವಾಣಿ ನಂಬರ್ ಗಳನ್ನು ತಲುಪಿಸಲು ವ್ಯವಸ್ಥೆ ಮಾಡಿ ಎಂದು ನಿರ್ದೇಶನ ನೀಡಿ, ವಿಚಾರಣೆಯನ್ನು ಆ.13ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News