ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಹೆಚ್ಚು ನಿಗಾ ವಹಿಸಲು ಉಪಮುಖ್ಯಮಂತ್ರಿ ಕಾರಜೋಳ ಸೂಚನೆ

Update: 2020-07-23 12:30 GMT

ಬೆಂಗಳೂರು, ಜು. 23: ಕೊರೋನ ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ಹೆಚ್ಚು ನಿಗಾವಹಿಸಿ, ನಿರಾಶ್ರಿತರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಹಾಗೂ ವ್ಯಕ್ತಿಗತ ಅಂತರ ಕಾಪಾಡುವಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಸೂಚಿಸಿದ್ದಾರೆ.

ರಾಜ್ಯದಲ್ಲಿರುವ 14 ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ಒಟ್ಟು 2,733 ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲಾಗಿದೆ. ಬೆಂಗಳೂರಿನಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ 673 ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಈ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಪ್ರತ್ಯೇಕ ಆಸ್ಪತ್ರೆ ಇದ್ದು, ಇಬ್ಬರು ವೈದ್ಯರು ಹಾಗೂ 8 ನರ್ಸ್‍ಗಳಿದ್ದಾರೆ. ಎಲ್ಲ ಅಗತ್ಯ ಔಷಧಿಯೂ ಲಭ್ಯವಿದೆ. ಹೆಚ್ಚಿನ ಚಿಕಿತ್ಸೆಗೆ ಅನುಕೂಲವಾಗುವಂತೆ ಒಂದು ಪತ್ಯೇಕ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಎಲ್ಲ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸರಕಾರದ ನಿರ್ದೇಶನಗಳನ್ನು ಪಾಲಿಸುತ್ತಿರುವುದರಿಂದ ಯಾವುದೇ ನಿರಾಶ್ರಿತರಿಗೆ ಸೊಂಕಿನ ಲಕ್ಷಣ ಕಂಡು ಬಂದಿಲ್ಲ. ಮುಂದೆಯೂ ಇದೇ ರೀತಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಾರಜೋಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಬೆಂಗಳೂರು ನಗರದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಗೃಹೋಪಯೋಗಿ ವಸ್ತುಗಳ ತಯಾರಿಕೆ, ಹೊಲಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಕುರಿಸಾಕಾಣಿಕೆಯಲ್ಲಿ ಕಾರ್ಯನಿರ್ವಹಿಸುವವರಿಗೆ ದಿನಕ್ಕೆ 75 ರೂ. ದಿನಗೂಲಿ ನೀಡಲಾಗುತ್ತಿದೆ. ನೂತನವಾಗಿ ಮಂಜೂರಾಗಿರುವ ಯಾದಗಿರಿ, ಚಾಮಚಾಜನಗರ, ಹಾಸನ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ 3 ಜಿಲ್ಲೆಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕೊಪ್ಪಳ ಮತ್ತು ಹಾವೇರಿಯಲ್ಲಿ ನಿವೇಶನ ಪಡೆಯಲು ಕ್ರಮ ವಹಿಸಲಾಗುತ್ತಿದೆ ಎಂದು ಗೋವಿಂದ ಕಾರಜೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News