ಮಡಿಕೇರಿ: ಲಾಕ್​ಡೌನ್ ನಿಂದ ಬೀದಿಗೆ ಬಿತ್ತು ಬಸ್ ನಿಲ್ದಾಣ ಸ್ವಚ್ಛತಾ ಕಾರ್ಮಿಕ ದಂಪತಿಯ ಬದುಕು

Update: 2020-07-23 13:13 GMT

ಮಡಿಕೇರಿ, ಜು.23: ಹಲವು ವರ್ಷಗಳಿಂದ ಮಡಿಕೇರಿ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ವೃದ್ಧ ದಂಪತಿಗಳು ಈಗ ಬೀದಿಗೆ ಬಿದ್ದಿದ್ದಾರೆ.

ಬಸ್ ನಿಲ್ದಾಣದಲ್ಲಿ ಹತ್ತಾರು ವರ್ಷಗಳಿಂದ ಸ್ವಚ್ಛತಾ ಕಾರ್ಮಿಕರಾಗಿ ಚಿಕ್ಕ ಹಾಗೂ ಜಯಮ್ಮ ವೃದ್ಧ ದಂಪತಿ ದುಡಿಯುತ್ತಿದ್ದರು. ಆದರೆ ಕೊರೋನ ಲಾಕ್ ಡೌನ್ ಈ ಸ್ವಚ್ಛತಾ ಕಾರ್ಮಿಕರ ಕೆಲಸವನ್ನೂ ಕಿತ್ತುಕೊಂಡಿದೆ. ಇದೀಗ ಕೂಲಿಯೂ ಇಲ್ಲದೆ, ಆಶ್ರಯಕ್ಕೊಂದು ತಾಣವಿಲ್ಲದೆ ಯಾರದ್ದೋ ಖಾಸಗಿ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಮಳೆ, ಬಿಸಿಲಿನಲ್ಲಿ ಬದುಕು ಸಾಗಿಸುವಂತಾಗಿದೆ. 

ಒಮ್ಮೆ ಬಸ್‍ನಿಂದ ಬಿದ್ದು ಸೊಂಟ ಮುರಿದುಕೊಂಡಿರುವ ವೃದ್ಧೆ ಜಯಮ್ಮ ಅವರಿಗೆ ಈಗ ನಡೆದಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗುಡಿಸಲು ಬಿಟ್ಟು ಎಲ್ಲೂ ಹೋಗುತ್ತಿಲ್ಲ. ಇನ್ನು ಕಣ್ಣು ಕಾಣದ ಪತಿ ಚಿಕ್ಕ ಅವರು ಪತ್ನಿಯ ಸ್ಥಿತಿ ನೋಡಿ ಕಂಗಾಲಾಗಿ ಕಣ್ಣೀರುಡುತ್ತಿದ್ದಾರೆ. ದಿಕ್ಕಿಲ್ಲದ ಈ ವೃದ್ಧ ದಂಪತಿ ಕನಿಷ್ಠ ಊಟಕ್ಕೂ ಪರದಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ವೃದ್ಧ ದಂಪತಿಯ ಸ್ಥಿತಿಯನ್ನು ಕೆಲವು ತಿಂಗಳಿಂದ ಗಮನಿಸುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ಬಾರ್ ವೊಂದರ ನೌಕರರೊಬ್ಬರು ಇವರಿಗೆ ಪ್ರತಿ ದಿನ ಊಟ ತಿಂಡಿ ಪೂರೈಸುತ್ತಿದ್ದಾರೆ. ತಾತ್ಕಾಲಿಕ ಗುಡಿಸಲು ಕಟ್ಟಿಕೊಂಡು ಜೀವಿಸುತ್ತಿರುವ ವೃದ್ಧ ದಂಪತಿಗಳು ಈಗ ಈ ಆಶ್ರಯತಾಣವನ್ನೂ ಕಳೆದುಕೊಳ್ಳುವ ಆತಂಕವನ್ನು ಎದುರಿಸುತ್ತಿದ್ದಾರೆ. ಖಾಸಗಿ ಜಾಗದ ಮಾಲಕರು ಗುಡಿಸಲನ್ನು ತೆರವುಗೊಳಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News