ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸಲು ಎಐಎಂಎಸ್‍ಎಸ್ ಆಗ್ರಹ

Update: 2020-07-23 13:24 GMT

ಬೆಂಗಳೂರು, ಜು. 23: ಮಾಸಿಕ ಗೌರವಧನ 12 ಸಾವಿರ ರೂ.ನಿಗದಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 12 ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರದ ಕೈಗೊಂಡಿರುವ ಆಶಾ ಕಾರ್ಯಕರ್ತೆಯರಿಗೆ, ಎಐಎಂಎಸ್‍ಎಸ್ ಬೆಂಬಲ ಸೂಚಿಸಿದೆ. ಅಲ್ಲದೆ, ಅವರ ಎತ್ತಿರುವ ಬೇಡಿಕೆಗಳಾದ 12 ಸಾವಿರ ರೂ.ಮಾಸಿಕ ಗೌರವಧನ ಮತ್ತು ಸಮರ್ಪಕ ಆರೋಗ್ಯ ಪರಿಕರಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದೆ.

ಗುರುವಾರ ಆಶಾ ಕಾರ್ಯಕರ್ತೆಯರ ಮುಷ್ಕರವನ್ನು ಬೆಂಬಲಿಸಿ ಎಐಎಂಎಸ್‍ಎಸ್ ಕಾರ್ಯಕರ್ತೆಯರು ಆನ್‍ಲೈನ್ ಚಳವಳಿ ನಡೆಸಿ, ಆಶಾ ಕಾರ್ಯಕರ್ತೆಯರು ಗರ್ಭಿಣಿ ಮಹಿಳೆಯರ ಮತ್ತು ಬಾಣಂತಿಯರ ಆರೋಗ್ಯಕ್ಕೆ ಪೌಷ್ಠಕಾಂಶಗಳ ಪೂರೈಕೆ ಮತ್ತು ಮಕ್ಕಳ ಚುಚ್ಚು ಮದ್ದುಗಳನ್ನು ಕಾಲ ಕಾಲಕ್ಕೆ ಹಾಕಿಸಲು ಮನವೊಲಿಸಿ ಆಸ್ಪತ್ರೆಗೆ ಕೊಂಡಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಗ್ರಾಮ ಮತ್ತು ಕೊಳಗೇರಿ ಸಮುದಾಯದ ಆರೋಗ್ಯ ಸೇವೆಯಲ್ಲಿ ನಿರತರಾಗಿದ್ದವರು. ಆದರೆ ಈಗ ಅವರಿಗೆ ಕೊರೋನ ಸೋಂಕಿತರ ಕೆಲಸವನ್ನು ಕೊಡಲಾಗಿದೆ. ಅದರಿಂದಾಗಿ ಗರ್ಭಿಣಿ ಮಹಿಳೆಯರ, ನವಜಾತ ಶಿಶುಗಳ ಆರೋಗ್ಯ, ಲಸಿಕೆ ಕೆಲಸವು ನೆನೆಗುದಿಗೆ ಬಿದ್ದಿವೆ. ಆರೋಗ್ಯದ ತೊಂದರೆಗಳಿರುವ ಮಹಿಳೆಯರು ಹಾಗೂ ಮಕ್ಕಳು ಪರದಾಡುವಂತಾಗಿದೆ. ಇದರಿಂದ ರಾಜ್ಯದ ಬಡಜನತೆಯ ಆರೋಗ್ಯದ ಪರಿಸ್ಥಿತಿಯು ಚಿಂತಾಜನಕವಾಗಿದೆ. ಅಲ್ಲದೆ, ಪ್ರಸಕ್ತ ಸಂಕಷ್ಟದ ಪರಿಸ್ಥಿತಿಯಲ್ಲಿ ಕೊರೋನ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಯೋಧರಾಗಿ ಸತತವಾಗಿ, ನಾಲ್ಕು ತಿಂಗಳಿಂದ ದಕ್ಷತೆಯಿಂದ ಕೆಲಸ ನಿರ್ವಹಿಸುತ್ತಿರುವ ಆಶಾಗಳ ಯೋಗಕ್ಷೇಮ ಸರಕಾರ ಕೈಬಿಟ್ಟಿದೆ ಎಂದು ಟೀಕಿಸಿದೆ.

ಆಶಾ ಕಾರ್ಯಕರ್ತೆಯರು ಆರೇಳು ಬಾರಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದರೂ ರಾಜ್ಯ ಸರಕಾರ ಸ್ಪಂದಿಸದೆ ನಿರ್ಲಕ್ಷ್ಯ ತೋರಿರುವುದು ಅತ್ಯಂತ ಅಮಾನವೀಯ ಹಾಗೂ ಖಂಡನೀಯ. ಇವರ ಸೇವೆಗೆ ಬರಿಯ ಚಪ್ಪಾಳೆ ಅಥವಾ ಹೂಮಳೆ ಸುರಿಸುವುದರಿಂದ, ದೀಪ ಹಚ್ಚುವುದರಿಂದ ಅವರಿಗೆ ಯಾವುದೇ ಪ್ರಯೋಜನ ಅಥವಾ ಅವರ ಬೇಡಿಕೆಗಳಿಗೆ ಪರಿಹಾರಗಳಾಗುವುದಿಲ್ಲ. ಬದಲಾಗಿ ಸರಕಾರ ತನ್ನ ಹಠಮಾರಿ ಧೋರಣೆಯಿಂದ ಹೊರಬಂದು ಇವರ ಸಮಸ್ಯೆಗಳಿಗೆ ಕಿವಿ ಕೊಡಬೇಕೆಂದು ಸಂಘಟನೆ ಕಾರ್ಯದರ್ಶಿ ಶಾಂತಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News