×
Ad

ತೀವ್ರ ವಿರೋಧದ ನಡುವೆಯೇ 'ಕಾರ್ಮಿಕ ಕಾಯ್ದೆ ತಿದ್ದುಪಡಿ'ಗೆ ಸಚಿವ ಸಂಪುಟ ಒಪ್ಪಿಗೆ

Update: 2020-07-23 20:39 IST

ಬೆಂಗಳೂರು, ಜು. 23: ಕಾರ್ಮಿಕ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೇ ವಿವಾದಿತ ಕೈಗಾರಿಕಾ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಧುಸ್ವಾಮಿ, ಕೈಗಾರಿಕಾ ಕಾಯ್ದೆ-1948ರ ಕಲಂ 64 ಮತ್ತು 65ಕ್ಕೆ ತಿದ್ದುಪಡಿಗೆ ಒಪ್ಪಿಗೆ ನೀಡಿದ್ದು, ಇದರಿಂದ ಕಾರ್ಮಿಕರ ಕೆಲಸದ ಅವಧಿ ತ್ರೈಮಾಸಿಕ(ಮೂರು ತಿಂಗಳಿಗೆ)ಕ್ಕೆ 75 ಗಂಟೆಯಿಂದ 125 ಗಂಟೆಗಳಿಗೆ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.

ಈ ತಿದ್ದುಪಡಿಯಿಂದ ಕಾರ್ಮಿಕರು ಮೂರು ತಿಂಗಳಿಗೆ 50 ಗಂಟೆ ಹೆಚ್ಚುವರಿ ಕೆಲಸ ಮಾಡಬೇಕಿದೆ. ದಿನಕ್ಕೆ ಕನಿಷ್ಠ 35 ರಿಂದ 40 ನಿಮಿಷ ಹೆಚ್ಚಳವಾಗಲಿದೆ. ಅಲ್ಲದೆ, ಮೇಲ್ಕಂಡ ಕಾಯ್ದೆ ಕಲಂ 25 'ಕೆ' ಅಡಿಯಲ್ಲಿ ಕಾರ್ಮಿಕರ ಮಿತಿಯನ್ನು 100ರಿಂದ 300ಕ್ಕೆ ಹೆಚ್ಚಳ ಮಾಡಲಾಗಿದೆ. ಯಾವುದೇ ಕಾರ್ಖಾನೆ ಮುಚ್ಚಲು ಅಥವಾ ವಜಾಗೊಳಿಸುವ ಮೊದಲು ಸರಕಾರದಿಂದ ಅನುಮತಿ ಪಡೆಯಬೇಕು ಎಂಬ ಷರತ್ತು ಹಾಕಲಾಗಿದೆ ಎಂದು ಹೇಳಿದರು.

ಇದರ ಜೊತೆಗೆ ಗುತ್ತಿಗೆ ಕಾರ್ಮಿಕರ ಮಿತಿಯನ್ನು 20 ಅಥವಾ ಅದಕ್ಕಿಂತ ಹೆಚ್ಚಿನ ಕಾರ್ಮಿಕರನ್ನು ಹೊಂದಿರುವ ಯಾವುದೇ ಗುತ್ತಿಗೆದಾರರು ಗುತ್ತಿಗೆ ಕಾರ್ಮಿಕ ಕಾಯ್ದೆಯಡಿ ನಿಯಮಗಳನ್ನು ಪಾಲಿಸಬೇಕು. ವಿದ್ಯುತ್ ಬಳಸುವ ಘಟಕಗಳಲ್ಲಿ ಕಾರ್ಮಿಕರ ಮಿತಿಯನ್ನು 10ರಿಂದ 20ಕ್ಕೆ ಹೆಚ್ಚಿಸಲಾಗಿದೆ. ವಿದ್ಯುತ್ ಬಳಸದ ಕಾರ್ಖಾನೆಗಳಲ್ಲಿ 20ರಿಂದ 40ಕ್ಕೆ ಹೆಚ್ಚಿಸಲು ಕೈಗಾರಿಕಾ ಕಾಯ್ದೆ ತಿದ್ದುಪಡಿಗೆ ಮಾಡಲಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉದ್ಭವವಾಗಿರುವ ಸವಾಲುಗಳನ್ನು ಎದುರಿಸಲು ಕೈಗಾರಿಕಾ ವಿವಾದ ಕಾಯ್ದೆಯ ತಿದ್ದುಪಡಿ ಅನಿವಾರ್ಯ ಎಂದು ಅವರು ಸಮರ್ಥಿಸಿದರು.

ವೈದ್ಯಕೀಯ ಕಾಲೇಜಿಗೆ ಉಪಕರಣಗಳ ಖರೀದಿ: ಬೀದರ್ ವೈದ್ಯಕೀಯ ಕಾಲೇಜಿಗೆ 29.87 ಕೋಟಿ ರೂ.ಗಳ ವೆಚ್ಚದಲ್ಲಿ ವೈದ್ಯಕೀಯ ಉಪಕರಣಗಳನ್ನು ಖರೀದಿ ಮಾಡಲು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದೆ. ಕೆಎಸ್‍ಎಫ್‍ಸಿಯಿಂದ ಸಾಲ ಪಡೆದವರು ಬಡ್ಡಿ ದರ ಹೆಚ್ಚಿರುವುದರಿಂದ ಸಾಲವನ್ನು ತೀರಿಸಲು ತುಂಬಾ ಕಷ್ಟವಾಗುತ್ತಿತ್ತು. ಆದುದರಿಂದ ಸಾಲ ಪಡೆದವರು ಸಾಲವನ್ನು ತೀರಿಸಲು ಅನುಕೂಲವಾಗುವಂತೆ ಬಡ್ಡಿದರವನ್ನು ಶೇ.10ರಿಂದ 6ಕ್ಕೆ ಇಳಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ ಎಂದರು.

ಎಸಿಬಿಗೆ ನೇಮಕ: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಇದುವರೆಗೂ ಯಾವುದೇ ವೃಂದ ಮತ್ತು ನೇಮಕಾತಿ ನಿಯಮಗಳು ರಚನೆಯಾಗಿರಲಿಲ್ಲ. ಇದರಿಂದ ನೇಮಕಾತಿ ವಿಳಂಬವಾಗುತ್ತಿತು. ಈಗ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚನೆ ಮಾಡಲಾಗಿದ್ದು, ಇದಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ವಿಶೇಷ ಚೇತನ ಅಭಿವೃದ್ಧಿ ನಿಗಮದ ಸಿವಿಲ್ ಸೇವಾ ನಿಯಮಗಳಿಗೆ ತಿದ್ದುಪಡಿ ತರಲು ಸಂಪುಟ ಸಭೆಯಲ್ಲಿ ಸಮ್ಮತಿಸಿದೆ ಎಂದರು.

ಖಜಾನೆ ವ್ಯಾಪ್ತಿಗೆ ಸೇರ್ಪಡೆ: ಸಣ್ಣ ಸಣ್ಣ ಇಲಾಖೆಗಳಾದ ಸಣ್ಣ ಉಳಿತಾಯ ಯೋಜನಾ ಇಲಾಖೆ, ಪಿಂಚಣಿ ಇಲಾಖೆ ಮತ್ತು ಆಸ್ತಿ ಮತ್ತು ಋಣಬಾರ ಇಲಾಖೆಗಳಲ್ಲಿ ನೌಕರರ ಕೊರತೆ ಇದ್ದು, ತ್ವರಿತ ಗತಿಯಲ್ಲಿ ಕೆಲಸಗಳು ನಡೆಯುತ್ತಿಲ್ಲ. ಹೀಗಾಗಿ ಈ ಮೂರು ಇಲಾಖೆಗಳನ್ನು ಆಯುಕ್ತರು ಖಜಾನಾ ಇಲಾಖೆ ಇವರ ವ್ಯಾಪ್ತಿಗೆ ಸೇರಿಸಲು ಸಂಪುಟ ಅನುಮೋದನೆ ನೀಡಿದೆ.

ಡಿಜಿಟಲ್ ಎಕಾನಮಿ ಮಿಷಿನ್ ಕಂಪನಿ: ರಾಜ್ಯದಲ್ಲಿ ಈಗ ಸುಮಾರು 7000ಕ್ಕೂ ಹೆಚ್ಚು ಸ್ಟಾರ್ಟ್ ಆಪ್‍ಗಳನ್ನು ಹೊಂದಿದ್ದೇವೆ. ಇದನ್ನೆಲ್ಲಾ ನಾವು ಟೆಕ್ನಾಲಜಿ ಮಿಷಿನ್‍ಗಳ ಮೂಲಕ ನಿರ್ವಹಿಸಲಾಗುತ್ತಿತ್ತು. ಇದನ್ನು ನಿರ್ವಹಿಸಲು ಮಾಹಿತಿ ಸಂಗ್ರಹಣೆ ಮಾಡಿ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಹೀಗಾಗಿ ಡಿಜಿಟಲ್ ಎಕಾನಮಿ ಮಿಷಿನ್ ಕಂಪೆನಿಯನ್ನು ಸೆಕ್ಷನ್ 80ರಡಿ ಸ್ಥಾಪಿಸಲು ಅನುಮೋದನೆ ಪಡೆಯಲಾಗಿದೆ ಎಂದರು.

ಪ್ರಾಧಿಕಾರ ಪುನರ್ ರಚನೆ: ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಖಾಸಗಿ ವೈದ್ಯಕೀಯ ಸಂಸ್ಥೆಗಳ ಒಂದು ಸಣ್ಣ ತಿದ್ದುಪಡಿ ಮಾಡಿ ಅನುಮೋದನೆ ನೀಡಲಾಗಿದೆ. ಇಲ್ಲಿ ನೊಂದಣಿ ಮತ್ತು ಕುಂದು ಕೊರತೆ ನಿವಾರಣ ಪ್ರಾಧಿಕಾರ ಎಂದು ಇತ್ತು. ಅದರಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಿದ್ದರು. ಅದನ್ನು ಈಗ ಬೆಂಗಳೂರಿನಲ್ಲಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ, ಆಯುಕ್ತರು ಬಿಬಿಎಂಪಿ ಅಧ್ಯಕ್ಷತೆಯಲ್ಲಿ ಪ್ರಾಧಿಕಾರವನ್ನು ಪುನರ್ ರಚನೆ ಮಾಡಲಾಗುತ್ತಿದೆ ಎಂದರು.

ವಿಮಾನ ನಿಲ್ದಾಣದಲ್ಲಿ ಪಾಲುಗಾರಿಕೆ: ಕಾರವಾರದ ಅಂಕೋಲದಲ್ಲಿ ನೇವಿ ಪ್ರಾಜೆಕ್ಟ್ ಅವರು ವಿಮಾನ ನಿಲ್ದಾಣವನ್ನು ಅವರ ಉಪಯೋಗಕ್ಕಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ನಿಲ್ದಾಣವನ್ನು ರಾಜ್ಯ ಸರಕಾರದ ಬಳಕೆಗಾಗಿಯೂ ಕೋರಿದಾಗ ಅವರು ಒಪ್ಪಿಗೆ ನೀಡಿರುತ್ತಾರೆ. ಈ ಸಿವಿಲ್ ಎನ್‍ಕ್ಲೇವ್‍ಗೆ ರಾಜ್ಯ ಸರಕಾರದ ವತಿಯಿಂದ ನೀಡಬೇಕಾದ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಅತಿಥಿ ಗೃಹ ನವೀಕರಣ: ರಾಯಚೂರು ಜಿಲ್ಲೆಯಲ್ಲಿ ಯರಮಸ್‍ನಲ್ಲಿ ನೀರಾವರಿ ಇಲಾಖೆಗೆ ಸೇರಿದ ಜಾಗದಲ್ಲಿ ಇಂಡಿಯನ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಇಲ್ಲಿರುವ ಅತಿಥಿ ಗೃಹವನ್ನು ನವೀಕರಣ ಮಾಡಿ ಬಳಸಿಕೊಳ್ಳಲು 62 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗುವುದು. ಎರಡು ವರ್ಷಗಳ ಲೀಸ್ ಅವಧಿ ಮುಗಿದ ನಂತರ ಪ್ರಾಂಶುಪಾಲರು, ಸರಕಾರಿ ಇಂಜಿನಿಯರಿಂಗ್ ಕಾಲೇಜು ಅವರಿಗೆ ಹಸ್ತಾಂತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಇ-ಪಾವತಿ: ನ್ಯಾಯಾಲಯಗಳ ಶುಲ್ಕವನ್ನು ಇನ್ನು ಮುಂದೆ ಆನ್ ಲೈನ್‍ನಲ್ಲಿ ಪಾವತಿಸಲು ಅನುಮೋದನೆ ಪಡೆಯಲಾಗಿದೆ. ನ್ಯಾಯಾಲಯಗಳ ಶುಲ್ಕ ಹಾಗೂ ಮರುಪಾವತಿ ಕಾಯ್ದೆ 58 ಕಲಂ 68ಕ್ಕೆ ತಿದ್ದುಪಡಿ ತರಲು ಅನುಮೋದನೆ ಪಡೆಯಲಾಗಿದೆ. ಇನ್ನು ಮುಂದೆ ಸ್ಟಾಂಪ್ ಡ್ಯೂಟಿ, ನ್ಯಾಯಾಲಯಗಳ ಶುಲ್ಕ ಪಾವತಿಗಳನ್ನು ಇ-ಪಾವತಿಗಳ ಮೂಲಕವೇ ಪಾವತಿಸಲು ಅನುಕೂಲವಾಗುವುದು ಎಂದರು.

ಪುರಾತತ್ವ ಇಲಾಖೆಗೆ ವರ್ಗಾವಣೆ: ಕೊಡಗಿನ ಕೋಟೆ ಮತ್ತು ಅರಮನೆಯು ಶಿಥಿಲಾವಸ್ಥೆಯಲ್ಲಿದ್ದು, ಅದನ್ನು 10 ಕೋಟಿ ರೂ.ಗಳ ವೆಚ್ಚದಲ್ಲಿ ನವೀಕರಿಸಲು ಅನುಮೋದನೆ ಪಡೆಯಲಾಗಿದೆ. ನವೀಕರಣವಾದ ಮೇಲೆ ಕೊಡಗಿನ ಕೋಟೆ ಮತ್ತು ಅರಮನೆಯನ್ನು ಭಾರತೀಯ ಪುರಾತತ್ವ ಇಲಾಖೆ ವರ್ಗಾವಣೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಮಾಧುಸ್ವಾಮಿ ಹೇಳಿದರು.

ಕೋವಿಡ್-19 ಸಾಂಕ್ರಾಮಿಕ ರೋಗದ ಸಂದಿಗ್ಧ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ವಿವಾದಿತ ಕಾರ್ಮಿಕ ಕಾಯ್ದೆ ತಿದ್ದುಪಡಿ ಮೂಲಕ ಕೆಲಸ ಅವಧಿಯನ್ನು ಹೆಚ್ಚಳ ಮಾಡಿರುವುದು ಕಾರ್ಮಿಕರ ವಿರೋಧಿ. ಮಾತ್ರವಲ್ಲ ಇದೊಂದು ಮಾಲಕರ ಪರವಾದ ನೀತಿಯಾಗಿದೆ. ರಾಜ್ಯ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಕಾರ್ಮಿಕರು ಬೀದಿಗಿಳಿಯಲಿದ್ದಾರೆ'

-ಎಚ್.ವಿ.ಅನಂತ ಸುಬ್ಬರಾವ್, ಕಾರ್ಮಿಕ ಮುಖಂಡರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News