ಬಿಎಸ್‍ವೈ ಸರಕಾರ ರೈತರಿಗೆ ವಿಷ ಉಣಿಸುವ ಕೆಲಸಕ್ಕೆ ಕೈ ಹಾಕಿದೆ: ಕೋಡಿಹಳ್ಳಿ ಚಂದ್ರಶೇಖರ್ ಕಿಡಿ

Update: 2020-07-23 16:48 GMT

ಬೆಂಗಳೂರು, ಜು.23: ದೇಶದಲ್ಲಿ ಕೊರೋನ ಸೋಂಕಿನಿಂದಾಗಿ ಜನರ ಬದುಕು ಸಂಕಷ್ಟಕ್ಕೆ ಈಡಾದ ಸಂದರ್ಭದಲ್ಲೇ ಕೇಂದ್ರ ಹಾಗೂ ಕರ್ನಾಟಕ ಸರಕಾರ ಯಾವುದೇ ಚರ್ಚೆಗಳು ಇಲ್ಲದೇ ಸುಗ್ರೀವಾಜ್ಞೆಗಳ ಮೂಲಕ ಭೂ ಸುಧಾರಣ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ವಿದ್ಯುಚ್ಛಕ್ತಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ ಎಂದು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದಾರೆ.

ಗುರುವಾರ ನಗರದ ಮೌರ್ಯ ಸರ್ಕಲ್ ಮಹಾತ್ಮ ಗಾಂಧಿ ಪ್ರತಿಮೆಯ ಮುಂಭಾಗ ಬಿಜೆಪಿ ಸರಕಾರ ರೈತ ವಿರೋಧಿ ಕಾಯ್ದೆಗಳನ್ನು ಕೈಬಿಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್‍ಡೌನ್, ಸೀಲ್‍ಡೌನ್, ಕ್ವಾರಂಟೈನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಎಲ್ಲರ ಬಾಯಿಗೆ ಬಟ್ಟೆ ಕಟ್ಟಿಸಿ ರೈತ ವಿರೋಧಿ ಹೊಸ ಕಾಯ್ದೆಗಳ ತಿದ್ದುಪಡಿ ಜಾರಿಗೆ ತರುತ್ತಿರುವ ಉದ್ದೇಶವೇನು. ರಾಜ್ಯದಲ್ಲಿ ಕೃಷ್ಣಾ ಕಣಿವೆಯಲ್ಲಿ ಪ್ರವಾಹದಿಂದ ಕೊಚ್ಚಿ ಹೋದವರಿಗೆ ಮತ್ತು ಗುಡ್ಡ ಕುಸಿದು ಎಲ್ಲವನ್ನು ಕಳೆದುಕೊಂಡವರಿಗೆ ಪರಿಹಾರ ಕೊಡಲು ನಿಮಗೆ ಯೋಗ್ಯತೆ ಇಲ್ಲ ಎಂದು ಆರೋಪಿಸಿದರು.

ಕೊರೋನ ಸಂದರ್ಭದಲ್ಲಿ ಹಣ್ಣು ತರಕಾರಿ ಸೊಪ್ಪು ಬೆಳೆದು ಪೂರ್ಣ ನಷ್ಟಕ್ಕೆ ಒಳಗಾದವರಿಗೆ ಪರಿಹಾರ ನೀಡಿ ಸಂತೈಸುವಲ್ಲಿ ನಿಮ್ಮಿಂದ ಸಾಧ್ಯವಾಗಲಿಲ್ಲ. ಈ ನಮ್ಮ ಬದುಕಿಗೆ ಆಸರೆಯಾದ ಭೂಮಿಯ ಮೇಲೆ ಕಣ್ಣಿಟ್ಟು ಕುಳಿತ ಕಾರ್ಪೋರೇಟ್ ಕಂಪೆನಿಗಳ ಮೇಲೆ ನಗರದಲ್ಲಿ ಅಕ್ರಮ ಹಣ ಗಳಿಸಿ ಕುಳಿತಿದ್ದವರಿಗೆ ಹಣದಲ್ಲಿ ನಮ್ಮ ಬದುಕು ಕೊಂಡುಕೊಳ್ಳಲು ಈ ಕಾಯ್ದೆ ತಂದಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ರೈತ ನಾಯಕ, ರೈತ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕೈಯಿಂದಲೇ ರೈತರಿಗೆ ವಿಷ ಉಣಿಸುವ ಪರಿಸ್ಥಿತಿ ಈಗ ಬಂದಿದೆ. ಇದು ನಮ್ಮೆಲ್ಲರ ದುಃಖದ ಸಂಗತಿ. ಈ ಸುಗ್ರೀವಾಜ್ಞೆ ಬಂದ ನಂತರ ಇದು ಮೊದಲ ಎಚ್ಚರಿಕೆ, ಚಳವಳಿಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News