ನಮ್ಮ ದಾಖಲೆಗಳನ್ನು ಹೈಕೋರ್ಟ್ ನಲ್ಲಿ ನೀಡುತ್ತೇವೆ: ಸಿದ್ದರಾಮಯ್ಯ
ಬೆಂಗಳೂರು, ಜು.23: ಕೊರೋನ ಉಪಕರಣಗಳ ಖರೀದಿಯಲ್ಲಿ ಅಕ್ರಮ ನಡೆದಿಲ್ಲ ಎನ್ನುವ ವಿಶ್ವಾಸ ನಿಮಗಿದ್ದರೆ ಅಂಜಿಕೆ ಯಾಕೆ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, "ಕೊರೋನ ಉಪಕರಣಗಳ ಖರೀದಿಯಲ್ಲಿ ಅಕ್ರಮ ನಡೆದಿಲ್ಲ ಎನ್ನುವ ವಿಶ್ವಾಸ ನಿಮಗಿದ್ದರೆ ಅಂಜಿಕೆ ಯಾಕೆ?ಆರೋಪಗಳ ತನಿಖೆಯನ್ನು ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ಮಾಡಿಸಿ. ನಮ್ಮ ದಾಖಲೆಗಳನ್ನು ಅಲ್ಲಿಯೆ ನೀಡುತ್ತೇವೆ" ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಸಚಿವರಾದ ಡಾ.ಕೆ.ಸುಧಾಕರ್, ಬಸವರಾಜ ಬೊಮ್ಮಾಯಿ, ಬಿ.ಶ್ರೀರಾಮುಲು ಹಾಗೂ ಆರ್.ಅಶೋಕ್‍ಗೆ ಟ್ಯಾಗ್ ಮಾಡಿದ್ದಾರೆ.
2019ರ ವೆಂಟಿಲೇಟರ್ ಖರೀದಿಯಲ್ಲಿಯೂ ಅಕ್ರಮವಾಗಿದೆ, ಅದೇನು ಚಂದ್ರಲೋಕದಿಂದ ಬಂದಿತ್ತಾ? ಎಂದು ಕೇಳಿದ್ದಿರಲ್ಲಾ ಆರ್.ಅಶೋಕ್ ಅವರೇ, ಆಗ ಅಕ್ರಮವಾಗಿದ್ದರೆ ವಿರೋಧ ಪಕ್ಷದಲ್ಲಿದ್ದ ನೀವ್ಯಾಕೆ ಆಗಲೇ ಪ್ರಶ್ನಿಸಲಿಲ್ಲ. ಆ ಕಾಲದಲ್ಲಿ ನೀವು ಮಂಗಳ ಗ್ರಹದಲ್ಲಿ ಇದ್ರಾ? ಎಂದು ವ್ಯಂಗ್ಯವಾಡಿದ್ದಾರೆ.