‘ಪುತ್ರಿಯಿದ್ದ ಮಾತ್ರಕ್ಕೆ ಪುರುಷನೊಬ್ಬ ಸಭ್ಯನಾಗಲಾರ’: ಡೆಮಾಕ್ರಟಿಕ್ ನಾಯಕಿ ಅಲೆಕ್ಸಾಂಡ್ರಿಯ ಭಾಷಣ ವೈರಲ್

Update: 2020-07-24 16:40 GMT

ವಾಷಿಂಗ್ಟನ್: ತನ್ನನ್ನು ಅಶ್ಲೀಲವಾಗಿ ನಿಂದಿಸಿದ ರಿಪಬ್ಲಿಕನ್ ಪಾರ್ಟಿಯ ಪ್ರತಿನಿಧಿಯೊಬ್ಬರ ವಿರುದ್ಧ ಡೆಮಾಕ್ರಟಿಕ್ ಪಕ್ಷದ ಪ್ರತಿನಿಧಿಯೊಬ್ಬರು ಮಾಡಿರುವ ಭಾಷಣದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಭಾರೀ ಮೆಚ್ಚುಗೆ ಗಳಿಸಿದೆ.

ಡೆಮಾಕ್ರಟಿಕ್ ಪಾರ್ಟಿಯ ಅಲೆಕ್ಸಾಂಡ್ರಿಯ ಒಕಾಸಿಯೊ ಕೋರ್ಟೆಝ್ ರಿಪಬ್ಲಿಕ್ ಪಕ್ಷದ ಟೆಡ್ ಯೋಹೋ ವಿರುದ್ಧ ಮಾಡಿರುವ ಭಾಷಣ ಇದಾಗಿದೆ.

“ಆತ ನನ್ನನ್ನು ಅಸಹ್ಯಕರ ಎಂದರು, ನನ್ನನ್ನು ಹುಚ್ಚಿ ಎಂದರು, ನನ್ನ ತಲೆ ಸರಿ ಇಲ್ಲ ಎಂದರು” ಎಂದು ಹೌಸ್ ಆಫ್ ರೆಪ್ರೆಸೆಂಟೀವ್ಸ್ ನಲ್ಲಿ ಮಾತನಾಡುತ್ತಾ ಅಲೆಕ್ಸಾಂಡ್ರಿಯಾ ಹೇಳಿದರು.

“ಪತ್ರಕರ್ತರ, ಪ್ರತಿನಿಧಿಗಳ ಎದುರೇ ಯೋಹೋ ನನ್ನನ್ನು ವೇಶ್ಯೆ ಎಂದರು. ನಾನು 65 ವರ್ಷದ ಯೋಹೋರಿಂದ ಕ್ಷಮೆಯನ್ನೇನೂ ಬಯಸುತ್ತಿಲ್ಲ. ಆದರೆ ಅವರ ವರ್ತನೆಯು ಮಹಿಳೆಯರೊಂದಿಗಿನ ವರ್ತನೆಯ ಸಮಸ್ಯೆಯ ಲಕ್ಷಣವಾಗಿದೆ. ಇದು ಮಹಿಳೆಯರೊಂದಿಗಿನ ವರ್ತನೆ ಮತ್ತು ಇತರರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ರೀತಿ. ಇಂತಹದ್ದನ್ನು ನಿರ್ದಿಷ್ಟ ರೀತಿಯಲ್ಲಿ ಎದುರಿಸಬೇಕಾಗಿದೆ. ಇದೇನು ಹೊಸತಲ್ಲದೇ ಇರುವುದೇ ನಿಜವಾಗಿಯೂ ನಮ್ಮೆದುರಿಗಿರುವ ಸಮಸ್ಯೆಯಾಗಿದೆ. ಇದು ಸಂಸ್ಕೃತಿಯಾಗಿ ಬಿಟ್ಟಿದೆ. ಮಹಿಳೆಯರ ವಿರುದ್ಧದ ದೌರ್ಜನ್ಯ ಮತ್ತು ನಿಂದನೆಯನ್ನು ಸ್ವೀಕರಿಸಿರುವ ಸಂಸ್ಕೃತಿಯಾಗಿದೆ. ಅಧಿಕಾರದ ಒಟ್ಟು ವ್ಯವಸ್ಥೆಯೇ ಇದಕ್ಕೆ ಬೆಂಬಲವಾಗಿ ನಿಲ್ಲುತ್ತದೆ” ಎಂದವರು ಹೇಳಿದರು.

“ಪುತ್ರಿಯಿದ್ದ ಮಾತ್ರಕ್ಕೆ ಪುರುಷನೊಬ್ಬ ಸಭ್ಯನಾಗಲಾರ. ಪತ್ನಿಯಿದ್ದ ಮಾತ್ರಕ್ಕೆ ಪುರುಷನೊಬ್ಬ ಸಭ್ಯನಾಗಲಾರ. ಜನರನ್ನು ಘನತೆಯಿಂದ ಕಾಣುವುದು ಮತ್ತು ಗೌರವಿಸುವುದು ವ್ಯಕ್ತಿಯೊಬ್ಬನನ್ನು ಸಭ್ಯನನ್ನಾಗಿಸುತ್ತದೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News