ಕೊರೋನ ವೈರಸ್ ಸೋಂಕಿನ ತೀವ್ರತೆ ಇರುವುದು ಕೆಲವೇ ದೇಶಗಳಲ್ಲಿ: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ

Update: 2020-07-24 16:54 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜು. 24: ಕೊರೋನ ವೈರಸ್ ಸೋಂಕಿನ ಕ್ಷಿಪ್ರ ಹರಡುವಿಕೆ ಕೆಲವೇ ದೇಶಗಳಲ್ಲಿ ನಡೆಯುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಗುರುವಾರ ಹೇಳಿದ್ದಾರೆ.

‘‘ದೇಶಗಳ ಸಣ್ಣ ಗುಂಪೊಂದರಲ್ಲಿ ಕೊರೋನ ವೈರಸ್ ಸೋಂಕು ಕ್ಷಿಪ್ರವಾಗಿ ಹರಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ’’ ಎಂದು ಜಿನೀವದಲ್ಲಿ ನಡೆದ ಅಶರೀರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಿಳಿಸಿದರು. ‘‘ಒಟ್ಟು ಜಾಗತಿಕ ಸೋಂಕು ಪ್ರಕರಣಗಳ ಮೂರನೇ ಎರಡರಷ್ಟು 10 ದೇಶಗಳಲ್ಲಿ ವರದಿಯಾಗಿವೆ. ಈವರೆಗೆ ವರದಿಯಾಗಿರುವ ಪ್ರಕರಣಗಳ ಅರ್ಧದಷ್ಟು ಕೇವಲ ಮೂರೇ ದೇಶಗಳಲ್ಲಿವೆ’’ ಎಂದರು.

ಅಮೆರಿಕದ ಕೊರೋನ ವೈರಸ್ ಸೋಂಕು ಪ್ರಕರಣಗಳು ಗುರುವಾರ 40 ಲಕ್ಷವನ್ನು ದಾಟಿದೆ ಹಾಗೂ ಪ್ರತಿ ಗಂಟೆಗೆ ಸರಾಸರಿ 2,600ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಇದು ಜಗತ್ತಿನಲ್ಲೇ ಅತಿ ಹೆಚ್ಚಿನ ಸೋಂಕು ದರವಾಗಿದೆ ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಯ ಅಂಕಿಅಂಶಗಳು ಹೇಳುತ್ತವೆ.

ಭಾರತಕ್ಕೆ ಕೊರೋನವನ್ನು ಮೆಟ್ಟಿ ನಿಲ್ಲಬಲ್ಲ ಸಾಮರ್ಥ್ಯವಿದೆ: ವಿಶ್ವ ಆರೋಗ್ಯ ಸಂಸ್ಥೆ

ನೂತನ-ಕೊರೋನ ವೈರಸ್‌ನ ತೀವ್ರ ದಾಳಿಗೆ ಒಳಗಾಗಿರುವ ಅಮೆರಿಕ, ಬ್ರೆಝಿಲ್ ಮತ್ತು ಭಾರತಗಳು ಈಗಲೂ ಸಾಂಕ್ರಾಮಿಕವನ್ನು ಮೆಟ್ಟಿ ನಿಲ್ಲಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಹೇಳಿದೆ.

‘‘ಈ ದೇಶಗಳು ಬಲಿಷ್ಠ, ಸಮರ್ಥ ಪ್ರಜಾಸತ್ತಾತ್ಮಕ ದೇಶಗಳು. ಈ ಕಾಯಿಲೆಯೊಂದಿಗೆ ವ್ಯವಹರಿಸಬಲ್ಲ ಅಗಾಧ ಆಂತರಿಕ ಸಾಮರ್ಥ್ಯ ಆ ದೇಶಗಳಿಗಿದೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಕಾರ್ಯಕ್ರಮಗಳ ಮುಖ್ಯಸ್ಥ ಡಾ. ಮೈಕ್ ರಯಾನ್ ಜಿನೀವದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News