ಆರ್‍ಟಿ-ಪಿಸಿಆರ್ ಹಾಗೂ ರ‍್ಯಾಪಿಡ್ ಆ್ಯಂಟಿಜೆನ್ ಪರೀಕ್ಷಾ ದರ ಪರಿಷ್ಕರಣೆ
ಬೆಂಗಳೂರು, ಜು.24: ರಾಜ್ಯ ಸರಕಾರವು ಕೋವಿಡ್-19 ಸೋಂಕು ಪರೀಕ್ಷಿಸಲು ಈ ಹಿಂದೆ ಆರ್‍ಟಿ-ಪಿಸಿಆರ್ ಪರೀಕ್ಷೆಗೆ ನಿಗದಿಪಡಿಸಿದ್ದ 2250 ರೂ.ದರವನ್ನು ಶುಕ್ರವಾರ ಕೋವಿಡ್ ಟಾಸ್ಕ್ ಫೋರ್ಸ್ ಪರಿಷ್ಕರಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ತಿಳಿಸಿದ್ದಾರೆ.
ಈ ಸಂಬಂಧ ಸರಕಾರಿ ಆದೇಶ ಹೊರಡಿಸಿರುವ ಅವರು, ರಾಜ್ಯ ಸರಕಾರದ ವತಿಯಿಂದ ಖಾಸಗಿ ಲ್ಯಾಬೋರೇಟರಿಗಳಿಗೆ ಆರ್‍ಟಿ-ಪಿಸಿಆರ್ ಟೆಸ್ಟ್ ಗೆ ಕಳುಹಿಸಿಕೊಡುವ ಮಾದರಿಗಳ ಪರೀಕ್ಷೆಗೆ(ಸ್ಕ್ರೀನಿಂಗ್ ಟೆಸ್ಟ್ ಹಾಗೂ ದೃಢೀಕೃತ ಪರೀಕ್ಷೆ, ಪಿಪಿಇ ಕಿಟ್ ಒಳಗೊಂಡಂತೆ) ತಲಾ 2000 ರೂ. ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳ ಮೂಲಕ ಖಾಸಗಿ ಲ್ಯಾಬೋರೇಟರಿಗಳಿಗೆ ಕಳುಹಿಸಲಾಗುವ ಮಾದರಿಗಳ ಪರೀಕ್ಷೆಗೆ(ಸ್ಕ್ರೀನಿಂಗ್ ಟೆಸ್ಟ್ ಹಾಗೂ ದೃಢೀಕೃತ ಪರೀಕ್ಷೆ, ಪಿಪಿಇ ಕಿಟ್ ಒಳಗೊಂಡಂತೆ) ತಲಾ 3000 ರೂ., ಖಾಸಗಿ ಲ್ಯಾಬೋರೇಟರಿಗಳಲ್ಲಿ ರ‍್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ(ಪಿಪಿಇ ಕಿಟ್ ಒಳಗೊಂಡಂತೆ) 700 ರೂ.ದರ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಪರೀಕ್ಷೆಗಳನ್ನು ಐಸಿಎಂಆರ್ ಮೂಲಕ ಮಾನ್ಯತೆ ಹೊಂದಿರುವ ಪ್ರಯೋಗಾಲಯಗಳಲ್ಲಿ ಮಾತ್ರ ನಡೆಸಬೇಕು. ಹಾಗೂ ಐಸಿಎಂಆರ್ ಮತ್ತು ರಾಜ್ಯ ಸರಕಾರದ ಇತರ ಎಲ್ಲ ಷರತ್ತುಗಳಿಗೆ ಒಳಪಟ್ಟಿರಬೇಕು ಎಂದು ಜಾವೇದ್ ಅಖ್ತರ್ ತಿಳಿಸಿದ್ದಾರೆ.