ವಾಣಿಜ್ಯ ಕಟ್ಟಡಗಳಲ್ಲಿರುವ ಹೊಟೇಲ್‍ಗಳಿಗೆ 1 ವರ್ಷ ಆಸ್ತಿ ತೆರಿಗೆ ಮನ್ನಾಕ್ಕೆ ಡಿಕೆಶಿ ಒತ್ತಾಯ

Update: 2020-07-24 18:17 GMT

ಬೆಂಗಳೂರು, ಜು. 24: ಕೊರೋನ ಸೋಂಕಿನ ಸಂಕಷ್ಟದ ಹಿನ್ನೆಲೆಯಲ್ಲಿ ನಷ್ಟದ ಸುಳಿಗೆ ಸಿಲುಕಿರುವ ವಾಣಿಜ್ಯ ಕಟ್ಟಡಗಳಲ್ಲಿರುವ ಹೊಟೇಲ್‍ಗಳಿಗೆ 2020-21ರ ಆಸ್ತಿ ತೆರಿಗೆಯನ್ನು ಕನಿಷ್ಟ ಒಂದು ವರ್ಷ ಮನ್ನಾ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.

ಎಲ್ಲ ಹೊಟೇಲ್‍ಗಳಲ್ಲಿ ಬೆಸ್ಕಾಂ ನಿಗದಿತ ಶುಲ್ಕವನ್ನು ಒಂದು ವರ್ಷ ಕಾಲ ವಜಾ ಮಾಡಬೇಕು. 2020-21ನೆ ಸಾಲಿನ ಸನ್ನದು ಶುಲ್ಕದಲ್ಲಿ ಕನಿಷ್ಟ ಒಂದು ವರ್ಷ ವಿನಾಯಿತಿ ನೀಡಿ, ಉಳಿದ ಶುಲ್ಕವನ್ನು ಕಟ್ಟಲು ಆರು ಕಂತುಗಳ ಅವಕಾಶ ನೀಡಬೇಕು. ಈಗಾಗಲೇ ಕಟ್ಟಿರುವ ನಿಗದಿತ ಶುಲ್ಕ/ಸನ್ನದು ಶುಲ್ಕವನ್ನು ಮುಂದಿನ ವರ್ಷದ ತೆರಿಗೆ ಶುಲ್ಕದೊಂದಿಗೆ ಹೊಂದಾಣಿಕೆ ಮಾಡಬೇಕು ಎಂದು ಅವರು ಕೋರಿದ್ದಾರೆ.

ಹೊಟೇಲ್ ಕಾರ್ಮಿಕರಿಗೆ ಸಹಾಯಧನ ನೀಡುವ ಒಂದು ವಿಶೇಷ ಪ್ಯಾಕೇಜ್ ಘೋಷಿಸಬೇಕು. ನಾಲ್ಕು ತಿಂಗಳ ಲಾಕ್‍ಡೌನ್ ಹಾಗೂ ಗ್ರಾಹಕರ ಕುಸಿತದಿಂದ ಹೊಟೇಲ್ ಉದ್ಯಮ ತತ್ತರಿಸಿದೆ. ಇದುವರೆಗೂ ಈ ವರ್ಗದವರಿಗೆ ಸರಕಾರ ನೆರವು ನೀಡದಿರುವುದು ಬೇಸರದ ಸಂಗತಿ. ಹೀಗಾಗಿ ಕೂಡಲೇ ಈ ಕ್ಷೇತ್ರಕ್ಕೆ ಸೂಕ್ತ ನೆರವು ನೀಡಬೇಕು ಎಂದು ಕೋರಿ ಶಿವಕುಮಾರ್, ಸಿಎಂಗೆ ಪತ್ರ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News