ಸುಂಟಿಕೊಪ್ಪದಲ್ಲಿ ಅಕ್ರಮ ಬೀಟೆ ಸಾಗಾಟ: ಲಕ್ಷಾಂತರ ರೂ. ಮೌಲ್ಯದ ಮರ ವಶ; ಆರೋಪಿಗಳು ಪರಾರಿ

Update: 2020-07-25 16:46 GMT

ಮಡಿಕೇರಿ, ಜು.25: ಅಕ್ರಮ ಬೀಟೆ ಸಾಗಾಟ ಪ್ರಕರಣವನ್ನು ಪತ್ತೆ ಹಚ್ಚಿರುವ ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳು ಲಕ್ಷಾಂತರ ಮೌಲ್ಯದ ಮರಗಳನ್ನು ವಶಪಡಿಸಿಕೊಂಡಿದ್ದಾರೆ. 

ಸುಂಟಿಕೊಪ್ಪ ಸಮೀಪದ ಕಾಫಿ ತೋಟವೊಂದರಲ್ಲಿ ಬೀಟೆ ಮರವನ್ನು ಕಡಿದು ಜೀಪ್ ವೊಂದರಲ್ಲಿ ನಾಟ ಸಾಗಾಟ ಮಾಡುತ್ತಿದ್ದ ಸಂದರ್ಭ ಅರಣ್ಯ ವಲಯಾಧಿಕಾರಿ ಅನನ್ಯಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. 

ಆರೋಪಿಗಳಾದ ಹದ್ದುಶ ಮತ್ತು ರಝಾಕ್ ಎಂಬವರು ಪರಾರಿಯಾಗಿದ್ದಾರೆ. ಜೀಪ್ ಸೇರಿದಂತೆ ಸುಮಾರು 4 ಲಕ್ಷ ರೂ.ಮೌಲ್ಯದ ನಾಟಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಹಾಗೂ ಎಸಿಎಫ್ ಕೆ.ಎ.ನೆಹರು ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಮತ್ತೊಂದು ಪ್ರಕರಣದಲ್ಲಿ 7ನೇ ಹೊಸಕೋಟೆ ಗ್ರಾಮದಲ್ಲಿ ತೇಗದ ಮರಗಳನ್ನು ಅಕ್ರಮ ದಾಸ್ತಾನು ಮಾಡಿದ ಆರೋಪದ ಮೇರೆಗೆ ಸ್ಥಳೀಯ ನಿವಾಸಿ ಸುರೇಶ ಎಂಬುವವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಆನೆಕಾಡು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮಹದೇವನಾಯಕ್ ಹಾಗೂ ಸಿಬ್ಬಂದಿಗಳು ಆರೋಪಿಯ ಮನೆ ಶೋಧ ನಡೆಸಿ ಸುಮಾರು 50 ಸಾವಿರ ರೂ. ಮೌಲ್ಯದ ತೇಗದ ಕಟ್‍ ಸೈಝ್ ಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News