ಆಗಸ್ಟ್ 8ರಿಂದ ಗ್ರಾಮಗಳಲ್ಲಿ 'ಭೂಮಿ ಮಾರಾಟಕ್ಕಿಲ್ಲ' ನಾಮಫಲಕ: ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ

Update: 2020-07-25 17:09 GMT

ಮೈಸೂರು,ಜು.25: ಆಗಸ್ಟ್ 8, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯೊಡನೆ ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳುವಳಿಗೆ ಚಾಲನೆ ನೀಡಿದ ದಿನವಾಗಿದ್ದು, ಆ ದಿನದಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ಹಳ್ಳಿಗಳಲ್ಲಿ ಭೂಮಿ ಮಾರಾಟಕ್ಕಿಲ್ಲ, ಕಾರ್ಪೋರೇಟ್ ಕಂಪೆನಿ ಮತ್ತು ಬಂಡವಾಳಶಾಹಿಗಳಿಗೆ ಪ್ರವೇಶವಿಲ್ಲ ಎಂಬ ನಾಮಫಲಕವನ್ನು ಗ್ರಾಮದ ಮುಂದೆ ಹಾಕಲು ತೀರ್ಮಾನಿಸಲಾಗಿದೆ ಎಂದು ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಜಿಲ್ಲೆಯ ಒಂದು ಗ್ರಾಮದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದ್ದು, ಗ್ರಾಮಗಳ ಸಮಸ್ತ ಜನರಿಂದ ನಾಮಫಲಕ ಅನಾವರಣಗೊಳ್ಳಲಿದೆ. ಆ ದಿನದಂದು ಗ್ರಾಮಗಳಲ್ಲಿ ಭೂಮಿಯನ್ನು ಕಾರ್ಪೋರೇಟ್ ಕಂಪನಿ ಅಥವಾ ಬಂಡವಾಳಶಾಹಿಗಳಿಗೆ ಮಾರಾಟ ಮಾಡುವುದಿಲ್ಲವೆಂದು ಶಪಥ ಮಾಡಲಾಗುವುದು. ಈ ಕಾರ್ಯಕ್ರಮವು ಆಗಸ್ಟ್ 8ರಿಂದ ನಿರಂತರವಾಗಿ ನಡೆಯಲಿದ್ದು, ಪ್ರತಿ ಗ್ರಾಮಗಳಲ್ಲಿ ನಾಮಫಲಕ ಹಾಕಲಾಗುವುದು ಎಂದರು.

ರೈತರ ಹಕ್ಕುಗಳನ್ನು ಪ್ರಭುತ್ವ ದಮನ ಮಾಡುತ್ತಿರುವುದನ್ನು ವಿರೋಧಿಸಿ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಬಳಿ ಇರುವ ಮೌರ್ಯ ಹೋಟೆಲ್ ಎದುರು ಇರುವ ಗಾಂಧಿ ಪ್ರತಿಮೆ ಮುಂದೆ 100 ಜನರಿಂದ ಎರಡು ಗಂಟೆಗಳ ಕಾಲ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅಂದು ಬೆಳಿಗ್ಗೆ ಹತ್ತು ಗಂಟೆಗೆ ಸಮಾವೇಶಗೊಂಡು ಗಾಂಧಿ ಪ್ರತಿಮೆಗೆ ಗೌರವ ಸಲ್ಲಿಸಿ ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ ಮೌನ ಪ್ರತಿಭಟನೆಯನ್ನು ನಡೆಸಲಾಗುವುದು. ನಮ್ಮ ಹಕ್ಕೊತ್ತಾಯವನ್ನು ಪ್ಲೇಕಾರ್ಡ್ ಮತ್ತು ಬ್ಯಾನರ್ ಗಳಲ್ಲಿ ಹಾಕಲಾಗುವುದು ಎಂದರು.

ತನಿಖೆಯಾಗಲಿ: ಕೊರೋನ ಉಪಕರಣಗಳನ್ನು ಕೊಳ್ಳುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಗಳು ಕೇಳಿ ಬರುತ್ತಿದ್ದು ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಒತ್ತಾಯಿಸಿದ ಅವರು ಈ ವ್ಯವಹಾರದಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲ ಎನ್ನುವುದಾದರೆ ಮುಖ್ಯಮಂತ್ರಿಗಳು ಕೂಡಲೇ ತನಿಖೆಗೆ ಈ ಪ್ರಕರಣವನ್ನು ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಆನ್ ಲೈನ್ ಪಾಠ ಬೇಡ: ಹಳ್ಳಿಗಳಲ್ಲಿ ಸಮರ್ಪಕ ಕರೆಂಟ್ ಇಲ್ಲ ಹಾಗೂ ನೆಟ್ ವರ್ಕ್ ಸಮಸ್ಯೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಹಳ್ಳಿಯ ಶಾಲಾ ಮಕ್ಕಳಿಗೆ ಒಗ್ಗಿರುವುದಿಲ್ಲ. ಈ ಕಾರಣ ಆನ್ ಲೈನ್ ಪಾಠ ಬೇಡವೇ ಬೇಡ ಎಂದು ಒತ್ತಾಯಿಸಿದರು. ಇದೇ ವೇಳೆ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಕೊರೋನ ವೈರಸ್ ಸೋಂಕು ಹರಡದಂತೆ ಜಾಗೃತಿ ಮೂಡಿಸಿ ದುಡಿದ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಶೆಟ್ಟಹಳ್ಳಿ ಚಂದ್ರೇಗೌಡ, ವಕೀಲ ಪುನೀತ್ ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News