ಮಗಳ ಸಾವಿಗೆ ಪ್ರತಿಕಾರವಾಗಿ ಯುವಕನ ಕೊಲೆ: ಆರೋಪಿ ತಂದೆಯ ಮನೆಗೆ ಬೆಂಕಿ ಹಚ್ಚಿದ ಉದ್ರಿಕ್ತ ಗುಂಪು

Update: 2020-07-25 17:42 GMT

ಬಾಗೇಪಲ್ಲಿ, ಜು.25: ಮಗಳ ಸಾವಿಗೆ ಪ್ರತಿಕಾರವಾಗಿ ವ್ಯಕ್ತಿಯೊಬ್ಬ ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದು, ಘಟನೆಗೆ ಸಂಬಂಧಿಸಿದಂತೆ ಕೊಲೆ ಆರೋಪಿಯ ಮನೆಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿದ ಘಟನೆ ಶನಿವಾರ ನಡೆದಿದೆ.

ಬಾಗೇಪಲ್ಲಿ ತಾಲೂಕಿನ ಗೂಳೂರು ಸಮೀಪದ ಯಗವ ಮದ್ದಲಖಾನೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹರೀಶ್ ಎಂಬಾತನನ್ನು ವೆಂಕಟೇಶ ಎಂಬಾತ ತನ್ನ ಮಗಳ ಸಾವಿನ ಪ್ರತೀಕಾರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮತ್ತು ಮೃತ ಹರೀಶ್ ಕುಟುಂಬಸ್ಥರು ಕೊಲೆ ಆರೋಪಿಯ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಗಂಗರಾಜು(25) ಎಂಬಾತನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗ್ರಾಮದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ.

ನಿನ್ನೆ ಮಧ್ಯರಾತ್ರಿ ಮೃತ ಹರೀಶ್ ಶವವನ್ನು ಆಸ್ಪತ್ರೆಗೆ ಸಾಗಿಸಿದ ಪೊಲೀಸರು ಶವ ಪರೀಕ್ಷೆ ನಡೆಸಿ ಗ್ರಾಮಕ್ಕೆ ತಂದಾಗ ಗ್ರಾಮಸ್ಥರು ಆರೋಪಿ ಮನೆಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಅಲ್ಲದೇ, ಕೊಲೆ ಆರೋಪಿ ವೆಂಕಟೇಶನ ಮನೆಯಲ್ಲಿ ಹರೀಶನನ್ನು ಸಮಾಧಿ ಮಾಡಬೇಕು ಎಂದು ಹರೀಶನ ಸಂಬಂಧಿಕರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು ಎನ್ನಲಾಗಿದೆ.

ಈ ಬಗ್ಗೆ ಎಸ್‍ಪಿ ಮಿಥುನ್ ಕುಮಾರ್ ಪ್ರತಿಕ್ರಿಯಿಸಿದ್ದು, ಪ್ರೇಮ ಪ್ರಕರಣ ಕೊಲೆಗೆ ಕಾರಣವಾಗಿದ್ದು, 10 ತಿಂಗಳ ಹಿಂದೆ ಮೃತ ಹರೀಶ್ ಮತ್ತು 1ನೇ ಆರೋಪಿ ವೆಂಕಟೇಶಪ್ಪ ಮಗಳು ಪ್ರೀತಿಸಿ ಓಡಿ ಹೋಗಿದ್ದರು. ನಂತರ ಗ್ರಾಮಕ್ಕೆ ವಾಪಸ್ ಆಗಿದ್ದರು. ಈ ಇಬ್ಬರು ವಿವಾಹ ಮಾಡುಕೊಳ್ಳಲು ಇಚ್ಚೆ ಪಟ್ಟಿದ್ದರು. ಆದರೆ ವೆಂಕಟೇಶಪ್ಪ ಹುಡುಗನಿಗೆ ಏನೂ ಕೆಲಸವಿಲ್ಲ ಎಂದು ಹೇಳಿ ಮಧುವೆಗೆ ವಿರೋಧಿಸಿದರು. ಹೀಗಾಗಿ ಮಗಳು ಆತ್ಮಹತ್ಯೆಗೆ ಶರಣಾಗಿದ್ದಳು. ಇದರಿಂದ ಕುಪಿತಗೊಂಡ ಯುವತಿಯ ಪೋಷಕರು ಪ್ರತೀಕಾರದ ರೂಪದಲ್ಲಿ ಹರೀಶನನ್ನು ಕೊಲೆ ಮಾಡಿದ್ದಾರೆ. ಹರೀಶ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ದಾರಿ ಮಧ್ಯೆ ತಡೆದು ಚೂರಿ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಗ್ರಾಮದಲ್ಲಿ ಉದ್ರಿಕ್ತ ಪರಿಸ್ಥಿತಿ ಇದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹೆಚ್ಚುವರಿ ಪೊಲೀಸರನ್ನು ಗ್ರಾಮದಲ್ಲಿ ನಿಯೋಜನೆ ಮಾಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News