ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಲು ಸರಕಾರಕ್ಕೆ ಒತ್ತಾಯಿಸಲು ಸಿದ್ದು, ಡಿಕೆಶಿಗೆ ಎಐಟಿಯುಸಿ ಮನವಿ

Update: 2020-07-25 18:20 GMT

ಬೆಂಗಳೂರು, ಜು.25: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಪಿಂಚಣಿ, ವೈದ್ಯಕೀಯ ಸೌಲಭ್ಯ ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರಕಾರವನ್ನು ಒತ್ತಾಯಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಎಐಟಿಯುಸಿ ಮನವಿ ಮಾಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಐಟಿಯುಸಿ, ಅಂಗನವಾಡಿ ಕಾರ್ಯಕರ್ತೆಯರಿಗೆ 2011ರಲ್ಲಿ ಎನ್‍ಪಿಎಸ್ ಯೋಜನೆ ತರಲಾಗಿದೆ. ಸರಕಾರ ಹಾಗೂ ಉದ್ಯೋಗಿಗಳು ಸಮಾನ ವಂತಿಗೆ ಪಾವತಿಸುತ್ತಿದ್ದಾರೆ. ಆದರೆ, ಸಾವಿರಾರು ಸಂಖ್ಯೆಯಲ್ಲಿ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಇಡಿಗಂಟು ಕೊಟ್ಟಿಲ್ಲ. ಹಾಗೂ ಪಿಂಚಣಿ ಬಾಬ್ತು ಕಡಿತ ಮಾಡಿದ್ದು, ಅದನ್ನು ಪಾವತಿಸಿಲ್ಲ. ಹೀಗಾಗಿ ಎನ್‍ಪಿಎಸ್ ಬದಲು ಎಲ್‍ಐಸಿ ಆಧಾರಿತ ಪಿಂಚಣಿ ಯೋಜನೆ ಜಾರಿ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ಹಾಗೂ ಉದ್ಯೋಗಿಗಳು ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರೆ, ಆ ಅವಧಿಯನ್ನು ವೇತನ ಸಹಿತ ರಜೆ ಎಂದು ಪರಿಗಣಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಾಗಿ 35-40 ವರ್ಷ ಸೇವೆ ಸಲ್ಲಿಸಿದವರಿಗೂ ಹಾಗೂ ಹೊಸದಾಗಿ ನೇಮಕಾತಿಯಾದ ಕಾರ್ಯಕರ್ತೆಯರಿಗೂ 10ಸಾವಿರ ರೂ. ಒಂದೇ ಮೊತ್ತ ಸಿಗುತ್ತಿದೆ. ಆದ್ದರಿಂದ ಪ್ರತಿವರ್ಷ ಸೇವೆಗೆ ಇಂತಿಷ್ಟು ಮೊತ್ತ ನಿಗದಿಪಡಿಸಿ, ಸೇವಾ ಹಿರಿತನದ ಆಧಾರದಲ್ಲಿ ವೇತನ ನಿಗದಿ ಪಡಿಸಬೇಕು. ಹಾಗೂ ಕೋವಿಡ್-19 ಸಂಬಂಧ ವಿಶೇಷ ಪ್ರೋತ್ಸಾಹಧನ ನೀಡುವಂತೆ ಸರಕಾರವನ್ನು ಒತ್ತಾಯಿಸಬೇಕೆಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಜಯಮ್ಮ ಪ್ರಕಟನಯ ಮೂಲಕ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News