ಕರ್ನಾಟಕ, ಮಧ್ಯಪ್ರದೇಶ ಬಳಿಕ ರಾಜಸ್ಥಾನದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ: ಬಿಜೆಪಿ ವಿರುದ್ಧ ಖಂಡ್ರೆ ಕಿಡಿ

Update: 2020-07-26 13:09 GMT

ಬೆಂಗಳೂರು, ಜು.26: ಇಡೀ ವಿಶ್ವವೆ ಒಗ್ಗಟ್ಟಿನಿಂದ ಮಾರಕ ಕೋವಿಡ್ ವಿರುದ್ಧ ಹೋರಾಡುತ್ತಿದ್ದರೆ, ಬಿಜೆಪಿ ಅಧಿಕಾರಕ್ಕಾಗಿ ಹಪಹಪಿಸುತ್ತಿದೆ. ರಾಜಸ್ಥಾನದಲ್ಲಿ ಸರಕಾರಕ್ಕೆ ಕೋವಿಡ್ ನಿಯಂತ್ರಣ ಮಾಡಲು, ರೋಗಿಗಳಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡಲೂ ಅವಕಾಶ ನೀಡದೆ ಸರಕಾರ ಉರುಳಿಸುವ ಪ್ರಯತ್ನ ಮಾಡಿ ಕಾಟ ನೀಡುತ್ತಿದೆ. ಇದು ಖಂಡನೀಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟ್ವೀಟ್ ಮಾಡಿದ್ದಾರೆ.

ಆಪರೇಷನ್ ಕಮಲಕ್ಕೆ ಬಿಜೆಪಿಯ ಬಳಿ ಅಪಾರ ಹಣ ಇದೆ. ಆದರೆ, ಕೋವಿಡ್ ರೋಗಿಗಳ ಚಿಕಿತ್ಸೆಗೆ, ಆಂಬುಲೆನ್ಸ್ ಗೆ ಹಣವಿಲ್ಲ. ಅಧಿಕಾರದಾಹಿ ಬಿಜೆಪಿಗೆ ಧಿಕ್ಕಾರ. ಬಿಜೆಪಿ ರಾಜಸ್ಥಾನದಲ್ಲಿ ಶಾಸಕರ ಖರೀದಿಯಲ್ಲಿ ನಿರತವಾಗಿದೆ, ಸರಕಾರ ಉರುಳಿಸುವ ಪ್ರಯತ್ನ ಮಾಡುತ್ತಿದೆ. ಇದು ಬಿಜೆಪಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಿಸುವ ಪರಿಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಹಣಬಲದಿಂದ ಮತ್ತು ಅಧಿಕಾರ ದುರುಪಯೋಗದಿಂದ ಬಿಜೆಪಿ ಒಂದೊಂದೇ ರಾಜ್ಯದಲ್ಲಿ ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಯತ್ನಿಸುತ್ತಿದೆ. ಕರ್ನಾಟಕ, ಮಧ್ಯಪ್ರದೇಶದ ಬಳಿಕ ಈಗ ರಾಜಸ್ಥಾನದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಇದು ಅಕ್ಷಮ್ಯ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ರಾಜಸ್ಥಾನದ ರಾಜ್ಯಪಾಲರು ತತ್ ಕ್ಷಣವೇ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಬಹುಮತ ಸಾಬೀತು ಪಡಿಸಲು ಅಧಿವೇಶನ ಕರೆಯಬೇಕು. ಬಿಜೆಪಿ ಏಜೆಂಟರಂತೆ ವರ್ತಿಸದೆ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾಪ್ರಭುತ್ವವನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಬಿಜೆಪಿ ಚುನಾಯಿತ ಸರಕಾರಗಳನ್ನು ಕೆಡವಿ, ತನ್ನ ಸರಕಾರ ರಚಿಸಲು ಆಪರೇಷನ್ ಕಮಲವನ್ನು ದೇಶದಾದ್ಯಂತ ಮಾಡುತ್ತಿದೆ. ಜನ ಕೊರೋನದಿಂದ ನರಳುತ್ತಿದ್ದರೆ, ಚಿಕಿತ್ಸೆ ಕೊಡಲೂ ಯೋಗ್ಯತೆ ಇಲ್ಲದ ಪಕ್ಷಕ್ಕೆ ಜನರ ಜೀವಕ್ಕಿಂತ ಅಧಿಕಾರವೇ ದೊಡ್ಡದಾಗಿದೆ. ಇದು ಬಿಜೆಪಿಯ ನಿಜ ಬಣ್ಣ ಬಯಲು ಮಾಡಿದೆ ಎಂದು ಈಶ್ವರ್ ಖಂಡ್ರೆ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News