ಹಜ್ ಭವನಕ್ಕೆ ವಳಚಿಲ್ ನಲ್ಲಿ ಸ್ಥಳ ಗುರುತಿನ ಹಿಂದೆ ರಿಯಲ್ ಎಸ್ಟೇಟ್ ಲಾಬಿ, ಕಮಿಷನ್ ದಂಧೆ: ಎಸ್‍ಡಿಪಿಐ

Update: 2020-07-26 15:47 GMT
ಇಲ್ಯಾಸ್ ಮುಹಮ್ಮದ್ ತುಂಬೆ

ಬೆಂಗಳೂರು, ಜು.26: 'ರಾಜ್ಯ ಹಜ್ ಸಮಿತಿಯು ಮಂಗಳೂರಿನ 'ವಳಚಿಲ್ ಪದವು' ಎಂಬಲ್ಲಿ ಇದೀಗ ಹಜ್ ಭವನ ನಿರ್ಮಿಸಲು ಸ್ಥಳ ಗುರುತಿಸಿದ್ದು ಇದರಲ್ಲಿ ಸ್ಥಳೀಯ ರಿಯಲ್ ಎಸ್ಟೇಟ್ ಲಾಬಿ, ಕಮಿಷನ್ ದಂಧೆ ಹಾಗೂ ಭ್ರಷ್ಟ ರಾಜಕೀಯ ಸ್ಪಷ್ಟವಾಗಿ ಕಂಡುಬರುತ್ತಿದೆ. ಜಿಲ್ಲೆಯ ಮುಸ್ಲಿಮ್ ಮುಂದಾಳುಗಳ ಆಕ್ಷೇಪವನ್ನು ಕಡೆಗಣಿಸಿ ವಳಚಿಲ್ ಪದವಿನಲ್ಲಿ ಹಜ್ ಭವನ ನಿರ್ಮಿಸಲು ಹೊಸದಾಗಿ ಸ್ಥಳ ಗುರುತಿಸಲಾಗಿದೆ' ಎಂದು ಎಸ್‍ಡಿಪಿಐ ರಾಜ್ಯ ಸಮಿತಿ ಆರೋಪಿಸಿದೆ.

ವಿಮಾನ ನಿಲ್ದಾಣದ ಸನಿಹ ಈ ಹಿಂದೆಯೇ ಸ್ಥಳ ಗುರುತಿಸಿಕೊಂಡ ಮರವೂರು ಎಂಬಲ್ಲಿ ಹಜ್ ಭವನ ನಿರ್ಮಾಣವಾಗಬೇಕೆಂಬ ಸಾರ್ವಜನಿಕ ಮುಸ್ಲಿಮರ ಬೇಡಿಕೆ ಮತ್ತು ಆಗ್ರಹವನ್ನು ಎಸ್‍ಡಿಪಿಐ ಬಲವಾಗಿ ಬೆಂಬಲಿಸುತ್ತದೆ. ಇದರ ಈಡೇರಿಕೆಗಾಗಿ ಯಾವುದೇ ರೀತಿಯ ಹೋರಾಟವನ್ನು ಎಸ್‍ಡಿಪಿಐ ಬೆಂಬಲಿಸುವುದು ಎಂದು ಎಸ್‍ಡಿಪಿಐ ರಾಜ್ಯ ಅಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರತಿಕ್ರಿಯಿಸಿದ್ದಾರೆ.

ಮಂಗಳೂರಿನ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಮರವೂರು ಎಂಬಲ್ಲಿ ಈ ಹಿಂದೆಯೇ ಸುಮಾರು 1.58 ಎಕರೆಯಷ್ಟು ಜಾಗವನ್ನು ಗುರುತಿಸಿದ್ದು ಅಲ್ಲಿ ಹಜ್ ಭವನ ನಿರ್ಮಾಣ ವಾದರೆ ಹಜ್ ಯಾತ್ರಿಕರಿಗೆ ಹಾಗೂ ಪ್ರಯಾಣ ವ್ಯವಸ್ಥೆಗೆ ಎಲ್ಲ ರೀತಿಯ ಅನುಕೂಲಗಳು ಒದಗುತ್ತವೆ ಮತ್ತು ಅತ್ಯಂತ ಸುಲಭವಾಗಿ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ಸನಿಹದಲ್ಲಿ ಮರವೂರು ಮುಖ್ಯ ರಸ್ತೆಯ ಬಳಿ ಇರುವ ಈ ಸ್ಥಳವು ಎಲ್ಲಾ ರೀತಿಯಲ್ಲೂ ಪ್ರಶಸ್ತವು ಮಹತ್ವವು ಆಗಿರುತ್ತದೆ. ಈ ಸ್ಥಳದ ಬಗ್ಗೆ ಏನಾದರೂ ಕಾನೂನು ತೊಡಕು ಇದ್ದಲ್ಲಿ ಅದನ್ನು ಅತ್ಯಂತ ಸುಲಭವಾಗಿ ಪರಿಹರಿಸಬಹುದಾಗಿದೆ. ಇದನ್ನು ಬಿಟ್ಟು ವಿಮಾನ ನಿಲ್ದಾಣಕ್ಕೆ ಬಹುದೂರ ಪ್ರದೇಶವಾದ ವಳಚಿಲ್ ಪದವು ಎಂಬ ಗುಡ್ಡ ಪ್ರದೇಶದಲ್ಲಿ 68 ಸೆಂಟ್ಸ್ ಸ್ಥಳದಲ್ಲಿ ಹಜ್ ಭವನಕ್ಕಾಗಿ ಸ್ಥಳ ಗುರುತಿಸಿರುವುದರ ಹಿಂದೆ ಕೆಲವು ಸ್ಥಾಪಿತ ಹಿತಾಸಕ್ತಿಗಳ ನೇರ ಕೈವಾಡವಿದೆ ಎಂದು ಇಲ್ಯಾಸ್ ತುಂಬೆ ಆರೋಪಿಸಿದ್ದಾರೆ.

ವಳಚಿಲ್ ಪದವು ಮತ್ತು ಸುತ್ತಮುತ್ತ ರಾಜಕಾರಣಿಗಳ ಹಾಗೂ ರಿಯಲ್ ಎಸ್ಟೇಟ್ ಕುಳಗಳ ಜಮೀನುಗಳಿಗೆ ಭಾರಿ ಬೇಡಿಕೆ ದೊರೆಯುವುದೆಂಬ ನೆಲೆಯಲ್ಲಿ ವಳಚಿಲ್ ಪದವು ಎಂಬ ಗುಡ್ಡ ಪ್ರದೇಶವನ್ನು ಗುರುತಿಸಿಕೊಂಡಿರುವುದು ಯಾವ ರೀತಿಯಲ್ಲೂ ಅನುಕೂಲವೂ ಅಲ್ಲ. ಪ್ರಶಸ್ತವೂ ಅಲ್ಲ. ಇಂತಹ ಲ್ಯಾಂಡ್ ಮಾಫಿಯಾ ಹಾಗೂ ಕ್ಷುದ್ರ ರಾಜಕೀಯಕ್ಕೆ ಹಜ್ ಭವನ ಒಳಗಾಗಬಾರದು ಎಂದು ರಾಜ್ಯ ಸರಕಾರಕ್ಕೆ ಅವರು ಎಚ್ಚರಿಸಿದ್ದಾರೆ.

ಹಜ್ ಭವನ ನಿರ್ಮಾಣದ ಉದ್ದೇಶವೇ ಹಜ್ ಯಾತ್ರಿಕರಿಗೆ ಸೌಕರ್ಯ ನೀಡುವುದು. ವಿಮಾನ ನಿಲ್ದಾಣದ ಹತ್ತಿರವಾಗಿದ್ದು ಕೊಂಡು ಸೌಲಭ್ಯಗಳನ್ನು ಒದಗಿಸುವುದು. ಸಾವಿರಾರು ಪ್ರಯಾಣಿಕರ ಸುಗಮ ಸಂಚಾರಕ್ಕೆ ಬೇಕಾದಂತಹ ವಿಶಾಲ ಸ್ಥಳವನ್ನು ಒದಗಿಸುವುದಾಗಿದೆ. ಹಾಗಾಗಿ ಮಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಮರವೂರು ಎಂಬ ಸ್ಥಳದಲ್ಲಿ ಅದಾಗಲೇ ಗುರುತಿಸಿಕೊಂಡಿರುವ 1.58 ಎಕರೆ ಸ್ಥಳವನ್ನು ಆಯ್ಕೆ ಮಾಡಿ ಹಜ್ ಭವನ ನಿರ್ಮಿಸಬೇಕೆಂದು ರಾಜ್ಯ ಸರಕಾರವನ್ನು ಇಲ್ಯಾಸ್ ಮುಹಮ್ಮದ್ ತುಂಬೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News