ಕೊರೋನ ಹೋರಾಟದಲ್ಲಿ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ: ಕಲಬುರಗಿ ಜಿಲ್ಲಾಧಿಕಾರಿ ಶರತ್ ಮನವಿ

Update: 2020-07-26 16:15 GMT

ಕಲಬುರಗಿ, ಜು.26: ಕೊರೋನ ಸಾಂಕ್ರಾಮಿಕ ಸೋಂಕಿನ ವಿರುದ್ಧ ಹೋರಾಟದಲ್ಲಿ ಜಿಲ್ಲೆಯ ಎಲ್ಲ ಸರಕಾರಿ ಮತ್ತು ಖಾಸಗಿ ಆಸ್ಪತ್ರೆ, ಕ್ಲಿನಿಕ್ ಸಿಬ್ಬಂದಿಗಳು ಜಿಲ್ಲಾಡಳಿತದ ಜೊತೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಶರತ್ ಬಿ. ಮನವಿ ಮಾಡಿದ್ದಾರೆ.

ದೇಶದಲ್ಲಿಯೇ ಕೊರೋನ ವೈರಸ್ ಸೋಂಕಿಗೆ ಮೊದಲ ಮೃತ ಪ್ರಕರಣದಿಂದ ಸುದ್ದಿಯಾದ ಕಲಬುರಗಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರು ಹೆಚ್ಚುತ್ತಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಸೋಂಕಿತರು ಸಕ್ರಿಯರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಆರೋಗ್ಯ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಜಿಲ್ಲೆಯ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಕೊರೋನ ಮಹಾಮಾರಿಗೆ ಹೆದರಿ ಬಹುತೇಕ ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರು ಹಾಜರಾಗುತ್ತಿರುವುದು ಗಮನಕ್ಕೆ ಬಂದಿದೆ. ಕೊರೋನ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಸಿಬ್ಬಂದಿಗಳೇ ಇಲ್ಲದಿದ್ದರೆ ಚಿಕಿತ್ಸೆಗೆ ತುಂಬಾ ತೊಂದರೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಎಲ್ಲ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಕೋವಿಡ್-19 ರೋಗಿಗಳಿಗೆ ಮೀಸಲಿಡುವಂತೆ ಸರಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ರೋಗಿಗೆ ಸೂಕ್ತ ಚಿಕಿತ್ಸೆ ನೀಡಲು ಆಯಾ ಆಸ್ಪತ್ರೆ ಮುಖ್ಯಸ್ಥರು ತಮ್ಮ ಸಿಬ್ಬಂದಿಗಳು ಪೂರ್ಣ ಪ್ರಮಾಣದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ನೋಡಿಕೊಳ್ಳಬೇಕು ಎಂದು ಶರತ್  ತಿಳಿಸಿದ್ದಾರೆ.

ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಕ್ರಮ: ಆರೋಗ್ಯ ಸಿಬ್ಬಂದಿಗಳು ಕೂಡಲೆ ಕರ್ತವ್ಯಕ್ಕೆ ಹಾಜರಾಗುವಂತೆ ಜಿಲ್ಲಾಧಿಕಾರಿ ಶರತ್ ಸೂಚನೆ ನೀಡಿದ್ದು, ತಪ್ಪಿದಲ್ಲಿ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.

ಟಿ.ಎಚ್.ಓ ಮತ್ತು ಪೊಲೀಸ್ ಠಾಣೆಗೆ ಮಾಹಿತಿ ನೀಡಿ: ಸಿಬ್ಬಂದಿಗಳು ಗೈರಾದಲ್ಲಿ ಕೂಡಲೇ ತಾಲೂಕು ಆರೋಗ್ಯ ಅಧಿಕಾರಿಗಳು ಮತ್ತು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ, ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News