ಕೊರೋನ ಸೋಂಕಿನಿಂದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಸಾವು
Update: 2020-07-27 21:13 IST
ಯಾದಗಿರಿ, ಜು.27: ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ(70) ಅವರು ಕೊರೋನ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಮರಣ ಹೊಂದಿದ್ದಾರೆ.
ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದ ಇವರು 1983ರಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ಗೆಲುವು ಸಾಧಿಸಿದ್ದರು. ಬಳಿಕ 1989ರಲ್ಲಿ ಮೂರನೆ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಒಂದು ಬಾರಿ ರಾಯಚೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.
ರಾಜಾ ಮದನಗೋಪಾಲ ನಾಯಕ ಅವರು ಶಿಕ್ಷಣ, ಚಿತ್ರಕಲೆ, ಸಾಹಿತ್ಯ, ನಾಟಕ ಸೇರಿ ಇನ್ನಿತರ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಇವರನ್ನು ಸಗರನಾಡಿನ ಸಾಂಸ್ಕೃತಿಕ ರಾಯಭಾರಿ ಎಂದೇ ಜನರು ಕರೆಯುತ್ತಿದ್ದರು.
ಕಫ, ನ್ಯುಮೋನಿಯಾ, ಕೆಮ್ಮಿನಿಂದ ಬಳಲುತ್ತಿದ್ದ ಇವರು, ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ.