ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಮೇಲೆ ದಾಳಿ ಪ್ರಕರಣ: ಫಲಾನುಭವಿಗಳ ನೆರವಿಗೆ ಧಾವಿಸಿದ ಎಸಿಬಿ

Update: 2020-07-27 17:03 GMT

ವಿಜಯಪುರ, ಜು.27: ಇಲ್ಲಿನ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧಿನಾಧಿಕಾರಿ ಕಚೇರಿ ಮೇಲೆ ದಾಳಿ ಪ್ರಕರಣ ಸಂಬಂಧ ಎಸಿಬಿ ಅಧಿಕಾರಿಗಳು ಭೂ ಪರಿಹಾರ ಫಲಾನುಭವಿಗಳಿಗೆ ಚೆಕ್ ವಿತರಿಸಿದ್ದು, ಹಲವರಿಂದ ಶ್ಲಾಘನೆ ವ್ಯಕ್ತವಾಗಿದೆ.

ಸೋಮವಾರ ನಗರದಲ್ಲಿ ಬೆಳಗಾವಿಯ ಎಸಿಬಿ ಪೊಲೀಸ್ ಅಧೀಕ್ಷಕ ಬಿ.ಎಸ್.ನ್ಯಾಮೇಗೌಡ ಮಾರ್ಗದರ್ಶನದಲ್ಲಿ ವಿಜಯಪುರ ಎಸಿಬಿ ಡಿಎಸ್ಪಿ ಎಲ್.ವೇಣುಗೋಪಾಲ ನೇತೃತ್ವದಲ್ಲಿ ಒಟ್ಟು 77 ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಯಿತು.

ಏನಿದು ಪ್ರಕರಣ?: ಇತ್ತೀಚಿಗಷ್ಟೇ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯ ಕಾರ್ಯ ನಿರ್ವಾಹಕ ಎ.ಎಂ.ಬಾಣಕಾರ ಬಲೆಗೆ ಬಿದ್ದಿದ್ದರು.

ವಕೀಲ ಆನಂದ ಕುಮಟಗಿ ಎಂಬುವರು ತಮ್ಮ ಕಕ್ಷಿದಾರರಿಗೆ ಸೇರಿದ ಬಸವನಬಾಗೇವಾಡಿ ತಾಲೂಕಿನ ದೇಗಿನಾಳ ಗ್ರಾಮದ ಜಮೀನುಗಳು ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂಸ್ವಾಧೀನಪಡಿಸಿಕೊಂಡಿದ್ದು, ಅದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಭೂ ಪರಿಹಾರ ಕೋರಿ 2017ರಲ್ಲಿ ಅರ್ಜಿ ತಯಾರಿಸಿ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ನ್ಯಾಯಾಲಯಕ್ಕೆ ಕಳುಹಿಸದ ಕಾರಣ ಆನಂದ ಅವರು ಎಸ್‍ಎಲ್‍ಒ ರಘು ಹಾಲನಹಳ್ಳಿ ಹಾಗೂ ಕೇಸ್ ವರ್ಕರ್ ಬಾಣಕಾರ ಅವರನ್ನು ಭೇಟಿ ಮಾಡಿದಾಗ ಬಾಣಕಾರ ಅವರು ಕಡತಗಳನ್ನು ತಯಾರು ಮಾಡಿ ಎಸ್‍ಎಲ್‍ಒ ಟೇಬಲ್‍ಗೆ ಇಡಲು 3 ಸಾವಿರ ರೂ.ಗಳ ಬೇಡಿಕೆ ಇಟ್ಟಿದ್ದಾರೆ ಎಂದು ಎಸಿಬಿ ಅಧಿಕಾರಿಗಳ ಬಳಿ ದೂರು ದಾಖಲಿಸಿದ್ದರು.

ಈ ಸಂಬಂಧ ಬೆಳಗಾವಿಯ ಎಸಿಬಿ ಪೊಲೀಸ್ ಅಧೀಕ್ಷಕ ಬಿ.ಎಸ್.ನ್ಯಾಮೇಗೌಡ ಮಾರ್ಗದರ್ಶನದಲ್ಲಿ ವಿಜಯಪುರ ಎಸಿಬಿ ಡಿಎಸ್ಪಿ ಎಲ್.ವೇಣುಗೋಪಾಲ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಗಳಾದ ಪಿ.ಜಿ.ಕವಟಗಿ, ಹರಿಶ್ಚಂದ್ರ, ವಿಶ್ವನಾಥ ಚೌಗಲೇ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇದೀಗ ಭೂ ಪರಿಹಾರ ಫಲಾನುಭವಿಗಳಿಗೆ ಚೆಕ್ ಅನ್ನು ವಿತರಣೆ ಮಾಡಿದ್ದು, ಬಾಕಿ ಇರುವ ಮತ್ತಷ್ಟು ಪರಿಹಾರ ಧನದ ಚೆಕ್‍ಗಳನ್ನು ಪರಿಶೀಲನೆ ಶೀರ್ಘದಲ್ಲಿಯೇ ವಿತರಿಸಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಪರಿಹಾರ ಬರಲ್ಲ ಎಂದುಕೊಂಡಿದ್ದೆ
2017ನೇ ಸಾಲಿನಲ್ಲಿಯೇ ನಮ್ಮ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಅಂದಿನಿಂದ ಭೂಮಿಯ ಪರಿಹಾರಕ್ಕಾಗಿ ಕಾಯುತ್ತಿದ್ದೆ. ಆದರೆ, ಮೂರು ವರ್ಷಗಳ ಬಳಿಕ, ನ್ಯಾಯ ದೊರೆತಿದ್ದು, ಇದಕ್ಕೆ ಎಸಿಬಿ ಅಧಿಕಾರಿಗಳೇ ಕಾರಣ.
-ಫಲಾನುಭವಿ ರಾಜಶ್ರೀ(ಹೆಸರು ಬದಲಾಯಿಸಲಾಗಿದೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News