×
Ad

‘ಫಾರ್ಮಾ ಪಾರ್ಕ್ʼಗಳ ಸ್ಥಾಪನೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸಚಿವ ಡಿವಿಎಸ್

Update: 2020-07-27 22:00 IST

ಹೊಸದಿಲ್ಲಿ, ಜು.27: ದೇಶದ ವಿವಿಧ ಭಾಗಗಳಲ್ಲಿ ನಾಲ್ಕು ‘ಫಾರ್ಮಾ ಪಾರ್ಕ್ʼಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸೋಮವಾರ ಬಿಡುಗಡೆ ಮಾಡಿದರು.

ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು. ‘ಕಳೆದ ಮಾರ್ಚ್ ತಿಂಗಳಲ್ಲಿ ಕೇಂದ್ರ ಸಚಿವ ಸಂಪುಟವು ಈ ಯೋಜನೆಗಳಿಗೆ ಅನುಮೋದನೆ ನೀಡಿತ್ತು. ಔಷಧೋದ್ಯಮ ವಲಯದಲ್ಲಿ ಭಾರತವನ್ನು ಸಂಪೂರ್ಣ ಸ್ವಾವಲಂಬಿ ಮಾಡಬೇಕು ಎಂಬ ಪ್ರಧಾನಿ ಮೋದಿಯ ಸಂಕಲ್ಪ, ದೂರದೃಷ್ಟಿಗೆ ಅನುಗುಣವಾಗಿ ಈ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.

ʼಬಲ್ಕ್ ಡ್ರಗ್ಸ್ʼ, ಎಕ್ಟಿವ್ ಫಾರ್ಮಾಸ್ಯುಟಿಕಲ್ ಇನ್‍ಗ್ರೇಡಿಯಂಟ್ಸ್ (ಎಪಿಐ), ʼಕೀ ಸ್ಟಾಟಿರ್ಂಗ್ ಮಟಿರಿಯಲ್ಸ್ʼ (ಕೆಎಸ್‍ಎಂಇ) ವೈದ್ಯಕೀಯ ಸಲಕರಣೆಗಳ ಉತ್ಪಾದನೆ- ಹೀಗೆ ಔಷಧೋದ್ಯಮಕ್ಕೆ ಸಂಬಂಧಿಸಿದ ವಿವಿಧ ವಲಯಗಳನ್ನು ಕೇಂದ್ರೀಕೃತವಾಗಿ ಈ ʼಫಾರ್ಮಾ ಪಾರ್ಕ್ʼಗಳು ಅಭಿವೃದ್ಧಿಯಾಗಲಿವೆ ಎಂದು ಸದಾನಂದಗೌಡ ತಿಳಿಸಿದರು.

ಈ ‘ಫಾರ್ಮಾ ಪಾರ್ಕ್ʼಗಳಲ್ಲಿ ರಾಜ್ಯ ಸರಕಾರಗಳು ಕನಿಷ್ಠಪಕ್ಷ ಶೇ.51ರಷ್ಟು ಪಾಲುಗಾರಿಕೆ ಹೊಂದಿರಬೇಕು. ಅಗತ್ಯ ಭೂಮಿ, ವಿದ್ಯತ್ ಹಾಗೂ ನೀರು ಒದಗಿಸುವುದು ಹಾಗೂ ಸಂಪರ್ಕ ರಸ್ತೆಗಳ ನಿರ್ಮಾಣ ಇವೇ ಮುಂತಾದ ಮೂಲಭೂತ ಸೌಕರ್ಯಗಳನ್ನು ನಿಗದಿತ ಅವಧಿಯೊಳಗೆ ಕಲ್ಪಿಸುವ ಜವಾಬ್ಧಾರಿ ರಾಜ್ಯಗಳದ್ದು ಎಂದು ಅವರು ಹೇಳಿದರು.

ಈ ‘ಫಾರ್ಮಾ ಪಾರ್ಕ್ʼಗಳು ‘ಪ್ಲಗ್ & ಪ್ಲೇ’ ನಮೂನೆಯಲ್ಲಿ ಸಿದ್ಧವಾಗಲಿವೆ. ಇದರಲ್ಲಿ ಆಧುನಿಕ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳು ಸೇರಿದಂತೆ ಎಲ್ಲ ಮೂಲ ಸೌಕರ್ಯಗಳು ಇರಲಿವೆ. ಉದ್ಯಮಿಯೊಬ್ಬರು ಬಯಸಿದರೆ ಈ ಪಾರ್ಕ್‍ಗಳಲ್ಲಿ ಅತಿ ಕಡಿಮೆ ಅವಧಿಯಲ್ಲಿ ಕೈಗಾರಿಕಾ ಘಟಕವನ್ನು ಸ್ಥಾಪಿಸಿ ಉತ್ಪಾದನೆ ಆರಂಭಿಸಬಹುದು ಎಂದು ಸದಾನಂದಗೌಡ ತಿಳಿಸಿದರು.

ಇದರಲ್ಲಿ ಸ್ಥಾಪಿತವಾಗುವ ಘಟಕಗಳಿಗೆ ನಮ್ಮ ಇಲಾಖೆಯು ಉತ್ಪಾದನಾ ಆಧಾರಿತ ಪ್ರೋತ್ಸಾಹಧನ ನೀಡಲಿದೆ. ದೇಶದ ಔಷಧೋದ್ಯಮಗಳು ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ಔಷಧ ಮತ್ತು ಔಷಧೋಪಕರಣಗಳನ್ನು ಉತ್ಪಾದನೆ ಮಾಡಲು ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.

ಈಗಾಗಲೇ ಹಲವು ರಾಜ್ಯಗಳು ಈ ಯೋಜನೆಗಳನ್ನು ಪಡೆದುಕೊಳ್ಳಲು ಉತ್ಸುಕರಾಗಿವೆ. ಇಂದು ಬಿಡುಗಡೆಯಾಗುತ್ತಿರುವ ಮಾರ್ಗಸೂಚಿಯಲ್ಲಿ ಯೋಜನೆಯ ಮಾನದಂಡಗಳ ವಿವರಗಳಿವೆ. ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ “ಫಾರ್ಮಾ ಪಾರ್ಕ್” ಯೋಜನಾ ಸ್ಥಳಗಳ ಆಯ್ಕೆಯು ಅಂತಿಮವಾಗುವುದು. ಇದರಲ್ಲಿ ಯಾವುದೇ ಪ್ರಭಾವಕ್ಕೆ ಅವಕಾಶವಿಲ್ಲ. ಯಾವುದೇ ರಾಜ್ಯದ ಪರ ಅಥವಾ ವಿರುದ್ಧ ಪಕ್ಷಪಾತ ಮಾಡುವುದಿಲ್ಲ ಎಂದು ಸದಾನಂದಗೌಡ ಸ್ಪಷ್ಟಪಡಿಸಿದರು.

ಕೊರೋನ ಬಿಕ್ಕಟ್ಟು ಜಾಗತಿಕ ಔಷಧ ಪೂರೈಕೆ ವ್ಯವಸ್ಥೆಯನ್ನು ಎಷ್ಟರ ಮಟ್ಟಿಗೆ ಅಸ್ತವ್ಯಸ್ತಗೊಳಿಸಹುದು ಮತ್ತು ಯಾವರೀತಿ ದೇಶದ ಆರೋಗ್ಯ ವ್ಯವಸ್ಥೆಯನ್ನು ಬುಡಮೇಲು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಆದರೆ ನಮ್ಮ ಔಷಧ ಇಲಾಖೆಯು ತ್ವರಿತವಾಗಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತು. ಹೀಗಾಗಿ ಲಾಕ್‍ಡೌನ್ ಅವಧಿಯಲ್ಲಿ ಕೂಡ ಔಷಧಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಲಾಯಿತು ಎಂದು ಅವರು ತಿಳಿಸಿದರು.

ಔಷಧೋದ್ಯಮದಲ್ಲಿ ಭಾರತವು ಸ್ವಾವಲಂಬಿಯಾಗಬೇಕು ಎಂಬುದು ಮುಂಚಿನಿಂದಲೂ ನಮ್ಮ ಸರಕಾರದ ಸಂಕಲ್ಪವಾಗಿತ್ತು. ಕೊರೋನ ಸಂಕಷ್ಟ ಎಸೆದ ಸವಾಲು ನಮ್ಮ ಈ ಸಂಕಲ್ಪವನ್ನು ಇನ್ನಷ್ಟು ಗಟ್ಟಿಗೊಳಿಸಿತು. ಫಾರ್ಮಾ ವಲಯಕ್ಕೆ ಸಂಬಂಧಿಸಿದಂತೆ ಭಾರತವು ವಿಶ್ವಸಮುದಾಯದ ವಿಶ್ವಾಸಾರ್ಹ ಪಾಲುದಾರನಾಗಿದೆ. ಕೊರೋನ ಬಿಕ್ಕಟ್ಟಿನ ವೇಳೆಯಲ್ಲಿಯೂ ಜಗತ್ತಿನ ಬಹುತೇಕ ದೇಶಗಳಿಗೆ ಹೈಡ್ರೋಕ್ಸಿಕ್ಲೋರೋಕ್ವಿನ್, ಪ್ಯಾರಾಸಿಟಮಾಲ್ ನಂತಹ ಪ್ರಮುಖ ಔಷಧಗಳನ್ನು ಭಾರತದ ಪೂರೈಸಿದೆ. ಇದರಿಂದ ವಿಶ್ವಾದ್ಯಂತ ಭಾರತದ ಬಗ್ಗೆ ಇರುವ ಸದ್ಭಾವನೆ ಇನ್ನಷ್ಟು ವೃದ್ಧಿಯಾಗಿದೆ. ಇದರ ಸದುಪಯೋಗಪಡಿಸಿಕೊಂಡು ದೇಶದ ಔಷಧೋದ್ಯಮವನ್ನು ಬೆಳೆಸುವ ಜವಾಬ್ಧಾರಿ ನಮ್ಮೆಲ್ಲರದ್ದು ಎಂದು ಸದಾನಂದಗೌಡ ಹೇಳಿದರು.

ವಿವಿಧ ರೀತಿಯ ಔಷಧ, ಮಾತ್ರೆಗನ್ನು ತಯಾರಿಸಲು ಅಗತ್ಯವಾದ ಸುಮಾರು 53 ಬಗೆಯ ಮೂಲ ಕಚ್ಚಾ ರಾಸಾಯನಿಕಗಳು, ಬಹುತೇಕವಾಗಿ ವಿದೇಶಗಳ ಮೇಲೆ ಅವಲಂಬಿತವಾಗಿದ್ದೇವೆ. ಈ ಪೈಕಿ ಕೆಲವು ಮೂಲ ರಾಸಾಯನಿಕಗಳು ಜೀವರಕ್ಷಕ ಔಷಧಗಳ ಉತ್ಪಾದನೆಯಲ್ಲಿ ಬಳುಸುವುದರಿಂದ ತುಂಬಾನೆ ಮಹತ್ವದ್ದಾಗಿವೆ. ಹಾಗೆಯೇ ಬಹುತೇಕ ವೈದ್ಯಕೀಯ ಉಪಕರಣಗಳಿಗಾಗಿಯೂ ನಾವು ಪರಾವಲಂಬಿಗಳಾಗಿದ್ದೇವೆ. ಈ ಕ್ಷೇತ್ರಗಳಲ್ಲಿ ಭಾರತವು ಸಂಪೂರ್ಣವಾಗಿ ವಿದೇಶಿ ಅವಲಂಬನೆಯಿಂದ ಹೊರಬಂದು ಸ್ವಾವಲಂಬಿಯಾಗಬೇಕು ಎಂಬುದೇ ಈ ಯೋಜನೆಗಳ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

2019-20ನೇ ಸಾಲಿನಲ್ಲಿ 40 ಸಾವಿರ ಕೋಟಿ ರೂ. ಮೌಲ್ಯದ ಫಾರ್ಮಾ ರಾಸಾಯನಿಕಗಳನ್ನು ಆಮದು ಮಾಡಿಕೊಳ್ಳಲಾಗಿದ್ದು, ಈ ಪೈಕಿ ಎಪಿಐಗಳ ಪಾಲು ಶೇ.63ರಷ್ಟಿದೆ. ಹಾಗೆಯೇ 2019-20ರಲ್ಲಿ 49,500 ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಇದು ದೇಶೀಯ ಅಗತ್ಯಗಳ ಶೇ.86ರಷ್ಟು ಎಂದು ಅವರು ಹೇಳಿದರು.

ಪ್ರಸ್ತುತ ದೇಶದ ಫಾರ್ಮಾ ಉದ್ಯಮವು 40 ಶತಕೋಟಿ ಡಾಲರ್ (ಸುಮಾರು 3 ಲಕ್ಷ ಕೋಟಿ ರೂಪಾಯಿ) ಮೌಲ್ಯದ್ದಾಗಿದೆ. ಇದನ್ನು 2024ರ ವೇಳೆಗೆ 100 ಶತಕೋಟಿ ಡಾಲರ್ (ಸುಮಾರು 7.5 ಲಕ್ಷ ಕೋಟಿ ರೂಪಾಯಿ) ಉದ್ಯಮಾಗಿಸುವ ಗುರಿಯನ್ನು ಹೊಂದಿದ್ದೇವೆ. ಆ ಮೂಲಕ, 2025ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯಾಗಿ ರೂಪಿಸುವ ಪ್ರಧಾನಿಯ ಆಕಾಂಕ್ಷೆಗೆ ಗುರುತರ ಕೊಡುಗೆ ನೀಡುವುದು ನಮ್ಮ ಉದ್ದೇಶ ಎಂದು ಸದಾನಂದ ಗೌಡ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News