ಪಿಂಚಣಿ ಹಣ ಬಿಡುಗಡೆ ಮಾಡಲು ಮೊದಲು ಆದೇಶ ನೀಡಿ: ಕುಮಾರಸ್ವಾಮಿ ಆಗ್ರಹ

Update: 2020-07-27 17:05 GMT

ಬೆಂಗಳೂರು, ಜು. 27: `ಐದಾರು ತಿಂಗಳಿನಿಂದ ಪಿಂಚಣಿ ಹಣ ಪಾವತಿಯಾಗದೇ ಅಂಗವಿಕಲರು, ವೃದ್ಧರು ಹಾಗೂ ವಿಧವೆಯರು ಪರಿತಪಿಸುತ್ತಿದ್ದಾರೆ. ಅಂಗವಿಕಲ, ವೃದ್ಧಾಪ್ಯ ಮತ್ತು ವಿಧವಾ ವೇತನವನ್ನು ತಕ್ಷಣ ಬಿಡುಗಡೆ ಮಾಡಲು ಸರಕಾರ ತುರ್ತು ಆದೇಶ ನೀಡಬೇಕು' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ಕೊರೋನ ಸಂಕಷ್ಟದ ಸಮಯದಲ್ಲಿ ಸಕಾಲಕ್ಕೆ ಪಿಂಚಣಿ ಕೈಗೆ ಸಿಗದೆ ಅಗತ್ಯ ಔಷಧಗಳನ್ನು ಕೊಳ್ಳಲೂ ಈ ಫಲಾನುಭವಿಗಳು ಪರದಾಡುತ್ತಿದ್ದಾರೆ. ಹಲವು ಮಂದಿಗೆ ಊಟಕ್ಕೂ ತತ್ವಾರವಾಗಿದೆ. ವರ್ಷಾಚರಣೆಯ ಸಂಭ್ರಮದಲ್ಲಿರುವ ಬಿಜೆಪಿ ಸರಕಾರ ಮೊದಲು ಹಣ ಬಿಡುಗಡೆಗೆ ಆದೇಶ ಮಾಡಬೇಕು' ಎಂದು ಒತ್ತಾಯಿಸಿದ್ದಾರೆ

`ಪಿಂಚಣಿ ಹಣಕ್ಕಾಗಿ ಕಳೆದ 5 ತಿಂಗಳಿಂದ ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲ ಫಲಾನುಭವಿಗಳನ್ನು ಅಲೆದಾಡಿಸಲಾಗುತ್ತಿದೆ. ಇದು ನಾಚಿಕೆಗೇಡು. ಈ ಸರ್ಕಾರಕ್ಕೆ ಕಣ್ಣು ಮತ್ತು ಕಿವಿಗಳು ಇಲ್ಲ' ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಟೀಕಿಸಿದ್ದಾರೆ.

`ಸವಾಲುಗಳ ವರ್ಷ; ಪರಿಹಾರದ ಸ್ಪರ್ಶ ಎಂಬ ಬೀಜ ಮಂತ್ರ ಪಠಿಸುತ್ತಿರುವ ಬಿಜೆಪಿ ಸರಕಾರದ ಬಡವರ ವಿರೋಧಿ ನೀತಿಗೆ ಇದಕ್ಕಿಂತ ಉದಾಹರಣೆ ಬೇಕೆ? ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?' ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News