×
Ad

ಖಾಸಗಿ ಆಸ್ಪತ್ರೆಗಳು ಕೊರೋನ ಸೋಂಕಿತರಿಗೆ ದಾಖಲಾತಿ ನಿರಾಕರಿಸುವಂತಿಲ್ಲ: ಟಿ.ಎಂ.ವಿಜಯ್‍ ಭಾಸ್ಕರ್

Update: 2020-07-27 22:37 IST

ಬೆಂಗಳೂರು, ಜು.27: ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಹೊರಡಿಸಿರುವ ಆದೇಶದ ಅನುಸಾರ ರಾಜ್ಯದ ಯಾವುದೇ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೊರೋನ ಅಥವಾ ಕೊರೋನದಂತಹ ರೋಗ ಲಕ್ಷಣಗಳುಳ್ಳ ರೋಗಿಗಳಿಗೆ ದಾಖಲಾತಿ ನಿರಾಕರಿಸುವಂತಿಲ್ಲ ಹಾಗೂ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಸೆಕ್ಷನ್‍ಗಳ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಅಧಿಸೂಚನೆ ಹೊರಡಿಸಿದ್ದಾರೆ.

ಸಾಮಾನ್ಯ ರೋಗಿಗಳೂ ಕೊರೋನ ಸೋಂಕಿಗೆ ಒಳಗಾಗಬಹುದೆಂಬ ಭಯದಿಂದ ರಾಜ್ಯದ ಕೆಲವು ಖಾಸಗಿ ವೈದ್ಯಕೀಯ ಸಂಸ್ಥೆಗಳು ಅವರಿಗೆ ಚಿಕಿತ್ಸೆ ನೀಡಲು ತಪ್ಪಿಸಿಕೊಳ್ಳುತ್ತಿದ್ದಾರೆ ಮತ್ತು ದಾಖಲಾತಿ ಮಾಡಿಕೊಳ್ಳಲು ನಿರಾಕರಿಸುತ್ತಿದ್ದಾರೆ. ಇದು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ ಕಾಯ್ದೆಯ ನಿಬಂಧನೆಗಳಿಗೆ ವಿರುದ್ಧವಾಗಿದೆ.

ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿದ್ದು, ರೋಗಿಯು ಶುಲ್ಕ ಭರಿಸಲು ಸಿದ್ಧನಾಗಿದ್ದಲ್ಲಿ ರಾಜ್ಯದ ಯಾವುದೇ ಖಾಸಗಿ ವೈದ್ಯಕೀಯ ಸಂಸ್ಥೆಗಳು ಪ್ರವೇಶ ನಿರಾಕರಿಸುವಂತಿಲ್ಲ. ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೊರೋನ ಅಥವಾ ಕೊರೋನ ಇಲ್ಲದಿರುವ ರೋಗಿಗೆ ಪ್ರಯೋಗಾಲಯದಿಂದ ಪಾಸಿಟಿವ್ ಅಥವಾ ನೆಗೆಟಿವ್ ವರದಿ ತರುವಂತೆ ಒತ್ತಾಯಿಸದೆ ರೋಗಿಗಳು ನೀಡುವ ಎಸ್‍ಎಮ್‍ಎಸ್, ವಾಟ್ಸ್ ಅಪ್ ಅಥವಾ ಆರೋಗ್ಯ ಸೇತು ವರದಿ ಇತ್ಯಾದಿಗಳ ಆಧಾರದ ಮೇಲೆ ರೋಗಿಗಳಿಗೆ ಚಿಕಿತ್ಸೆ ಅಥವಾ ಪ್ರವೇಶ ನೀಡಬೇಕೆಂದು ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News