ನಿಗಮ-ಮಂಡಳಿಗಳ ಅಧ್ಯಕ್ಷಗಿರಿ ಹಂಚುವ ತುರ್ತು ಏನಿತ್ತು: ಮುಖ್ಯಮಂತ್ರಿಗೆ ಆಪ್ ಪ್ರಶ್ನೆ
ಬೆಂಗಳೂರು, ಜು.27: ಜನ ಸಾಮಾನ್ಯರು ಬೆಡ್ಡುಗಳಿಲ್ಲದೆ, ಆಂಬ್ಯುಲೆನ್ಸ್ ಗಳಿಲ್ಲದೆ ರಸ್ತೆ ರಸ್ತೆಗಳಲ್ಲಿ ಸಾಯುತ್ತಿರುವಾಗ ಅಧ್ಯಕ್ಷಗಿರಿಗಳನ್ನು ಹಂಚುವ ತುರ್ತು ಏನಿತ್ತು ಮುಖ್ಯಮಂತ್ರಿ ಯಡಿಯೂರಪ್ಪನವರೇ? ಎಂದು ಆಮ್ ಆದ್ಮಿ ಪಕ್ಷ ಪ್ರಶ್ನೆ ಮಾಡಿದೆ.
ರಾಜ್ಯದಲ್ಲಿ ಕೊರೋನ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಈ ವಿಚಾರದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಜನಸಾಮಾನ್ಯರು ಅಲ್ಲಲ್ಲಿ ಬೆಡ್ಡುಗಳಿಲ್ಲದೆ, ಆಂಬ್ಯುಲೆನ್ಸ್‍ಗಳು ಸಮಯಕ್ಕೆ ಬಾರದೆ ಸ್ಥಳದಲ್ಲೇ ಅಸುನೀಗುತ್ತಿರುವ ದುಸ್ಥಿತಿಗೆ ಕರ್ನಾಟಕ ತಲುಪಿದೆ. ಇಂತಹ ಆತಂಕದ ಸ್ಥಿತಿಯಲ್ಲೂ ಶಾಸಕರಿಗೆ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರಾಗಿ ನೇಮಿಸುವ ಜರೂರು ಏನಿತ್ತು ಎಂಬುದೇ ನಮ್ಮ ಪ್ರಶ್ನೆ. ಬಿಜೆಪಿ ಪಕ್ಷದ ಶಾಸಕರು ಕುರ್ಚಿಯ ಆಸೆಗೆ ಲಾಭಿ ನಡೆಸುತ್ತಿರುವುದು ಕೆಟ್ಟ ಹಾಗೂ ಕೊಳಕು ರಾಜಕಾರಣಕ್ಕೆ ಸೂಕ್ತ ಉದಾಹರಣೆ ಎಂದು ಆಪ್ ಟೀಕಿಸಿದೆ.
ಇಂತಹ ಸಂಕಷ್ಟದ ಸಮಯದಲ್ಲಿ ಶಾಸಕರಿಗೆ ತಮ್ಮ ತಮ್ಮ ಕ್ಷೇತ್ರದಲ್ಲೇ ಇದ್ದುಕೊಂಡು ಸೋಂಕು ತಡೆಗಟ್ಟಲು ದಿಟ್ಟವಾಗಿ ಹೋರಾಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕಠಿಣ ಆದೇಶ ನೀಡುವ ಬದಲು, ಶಾಸಕರ ಅಡಿಯಾಳಿನಂತೆ ವರ್ತಿಸುತ್ತಿದ್ದಾರೆ. 1 ವರ್ಷ ಪೂರೈಸಿದ ನಶೆಯಲ್ಲಿ ತೇಲುತ್ತಿರುವ ಯಡಿಯೂರಪ್ಪ ತಾವು ಮುಖ್ಯಮಂತ್ರಿ ಎಂಬುದನ್ನೆ ಮರೆತು ಬಿಟ್ಟಿದ್ದಾರೆ ಎಂದು ಆಪ್ ದೂರಿದೆ.
ಅಧಿಕಾರಕ್ಕಾಗಿ ಪರಸ್ಪರ ಒಳಜಗಳ, ಕಾಲು ಎಳೆಯುವ ಹಾಗೂ ಹಣ ಮಾಡುವ ಕೆಲಸ ಬಿಟ್ಟು ಬೇರೇನೂ ಸಾಧಿಸಿದ್ದೀರಿ ಎಂದು ಜನರ ಎದುರು ಉತ್ತರಿಸಬೇಕಿದೆ. ಅನೇಕ ಜಿಲ್ಲೆಗಳಲ್ಲಿ ಸೂಕ್ತ ಹಾಗೂ ಜನಪರ ಪ್ರತಿನಿಧಿಗಳು ಇಲ್ಲದೇ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದ ಹಾಗೇ ವರ್ತಿಸುತ್ತಿದ್ದಾರೆ. ಆದರೂ ಸ್ಥಳೀಯ ಬಿಜೆಪಿ ಶಾಸಕರಿಗೆ ಸೂಕ್ತ ನಿರ್ದೇಶನ ನೀಡದೇ ರಾಜ್ಯವನ್ನು ಸ್ಮಶಾನ ಮಾಡಿದ ಕೀರ್ತಿ ಯಡಿಯೂರಪ್ಪಗೆ ಸಲ್ಲುತ್ತದೆ ಎಂದು ಆಪ್ ಆರೋಪಿಸಿದೆ.
ಈ ಕೂಡಲೇ ಬಿಜೆಪಿಯ ಎಲ್ಲ ಶಾಸಕರ ಸಭೆ ಕರೆದು ಪ್ರತಿ ಜಿಲ್ಲೆಯ ಉಸ್ತುವಾರಿ ಸಚಿವರ ಜತೆಗೆ ಹಾಗೂ ಅಧಿಕಾರಿಗಳ ಜತೆ ಶಾಸಕರು ಸೋಂಕು ತಡೆಗಟ್ಟಲು ತ್ವರಿತ ಮಾರ್ಗಗಳ ಬಗ್ಗೆ ಗಮನ ಹರಿಸಬೇಕು ಹಾಗೂ ಜನ ಪರವಾದ ಕೆಲಸ ಮಾಡುವಂತೆ ಸೂಚಿಸಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.