ಭೂ ಸುಧಾರಣೆ-ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆಯದಿದ್ದರೆ ಬೀದಿಗಿಳಿದು ಹೋರಾಟ: ದೇವೇಗೌಡ ಎಚ್ಚರಿಕೆ

Update: 2020-07-28 13:42 GMT

ಬೆಂಗಳೂರು, ಜು. 28: ಭೂ ಮಾಫಿಯಾಗೆ ಕುಮ್ಮಕ್ಕು ನೀಡುವ `ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ' ಮತ್ತು ರಾಜ್ಯಕ್ಕೆ ಮಾರಕವಾಗಲಿರುವ `ಎಪಿಎಂಸಿ ಕಾಯ್ದೆ ತಿದ್ದುಪಡಿ'ಯನ್ನು ಕೂಡಲೇ ಹಿಂಪಡೆಯದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಇಲ್ಲಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ವಿವಾದ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆಯಲಾಗಿದೆ. ಕೊರೋನ ಸಂಕಷ್ಟದ ಸಂದರ್ಭದಲ್ಲಿ ಸರಕಾರ ಅಧ್ಯಾದೇಶದ ಮೂಲಕ ಕಾಯ್ದೆ ಜಾರಿ ಮಾಡಿರುವುದು ಅಕ್ಷಮ್ಯ ಎಂದು ಟೀಕಿಸಿದರು.

ಕರ್ನಾಟಕ ಭೂ ಸುಧಾರಣೆ ಕಾಯ್ದೆ-1961, ಸೆಕ್ಷನ್ 79-`ಎ', 79-`ಬಿ', 79-`ಸಿ'ಯನ್ನು ರದ್ದು ಮಾಡಿರುವುದು ರೈತ ವಿರೋಧಿ ಕ್ರಮವಾಗಿದೆ. ಜೊತೆಗೆ ಎಪಿಎಂಸಿ ಕಾಯ್ದೆ ತಿದ್ದುಪಡಿಯೂ ರಾಜ್ಯಕ್ಕೆ ಮಾರಕವಾಗಿದೆ ಮತ್ತು ಕೈಗಾರಿಕೆ ವಿಚಾರ ಹಾಗೂ ಮತ್ತಿತರ ನಿಯಮಗಳ ತಿದ್ದುಪಡಿ ಮಾಡಿ ಸರಕಾರ ರೈತ ಹಾಗೂ ಕಾರ್ಮಿಕ ವಿರೋಧಿ ತೀರ್ಮಾನಗಳನ್ನೂ ಕೈಗೊಂಡಿದೆ ಎಂದು ದೇವೇಗೌಡ ಆರೋಪಿಸಿದರು.

ಮಹಾಮಾರಿ ಕೊರೋನ ಸೋಂಕಿನ ಕಾರಣ ನಾನು ಮಾತನಾಡಲು ಆಗಿರಲಿಲ್ಲ. ಸರಕಾರದ ನಿಯಮ ಉಲ್ಲಂಘಿಸಬಾರದು ಎಂದು ಇಷ್ಟು ದಿನ ಹಿಂದೆ ಸರಿದಿದ್ದೆ. ಹೀಗೆ ಮುಂದುವರಿದರೆ ರಾಜ್ಯದ ಜನತೆಗೆ ತೊಂದರೆಯಾಗುತ್ತದೆ ಎಂದು ಮಧ್ಯಮಗಳ ಮುಂದೆ ಬಂದಿದ್ದೇನೆ. ಕೂಡಲೇ ರಾಜ್ಯ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ದೇವೇಗೌಡ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕಾಯ್ದೆ ಪರಿಣಾಮ ಏನಾಗಲಿದೆ ಎಂಬ ಬಗ್ಗೆ ಸರಕಾರ ಯಾವುದೇ ಮಾಹಿತಿ ನೀಡದೆ ಕಾಯ್ದೆ ಜಾರಿಗೆ ಮುಂದಾಗಿದೆ. ಇದರಿಂದ  ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾಗೆ ಅನುಕೂಲವಾಗುತ್ತದೆ. ನಮ್ಮ ರೈತರು ಬೀದಿಗೆ ಬೀಳಲಿದ್ದಾರೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಈ ಮಾಫಿಯಾ ಮಿತಿ ಮೀರಲಿದೆ ಎಂದು ಎಚ್ಚರಿಸಿದ ದೇವೇಗೌಡ, ರಾಜ್ಯ ಸರಕಾರ ಕೂಡಲೇ ಈ ಕಾಯ್ದೆ ತಿದ್ದುಪಡಿಯನ್ನು ರದ್ದು ಮಾಡಿ ರೈತರ ಪರವಾಗಿ ನಿಲ್ಲಬೇಕು ಎಂದು ಕೋರಿದರು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಅತ್ಯಂತ ಕೆಟ್ಟ ತೀರ್ಮಾನ. ಯಾರೋ ಒಬ್ಬ ಕೈಗಾರಿಕೋದ್ಯಮಿ ಬಂದು ಭೂಮಿ ಖರೀದಿಸುತ್ತಾನೆ. ಕೈಗಾರಿಕೆ ಉದ್ದೇಶಕ್ಕಾಗಿ ಪಡೆದ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕು. ನಂತರ ಅವನಿಗೆ ಬೇಕಾದರೆ 7 ವರ್ಷಗಳ ನಂತರ ಅದೇ ಭೂಮಿಯನ್ನ ತನ್ನ ಇಷ್ಟ ಬಂದವರಿಗೆ ಪರಾಭಾರೆ ಮಾಡಬಹುದು. 7 ವರ್ಷಗಳ ನಂತರ ಅಂದಿನ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡುತ್ತಾನೆ. ಇದರಿಂದ ರೈತರಿಗೆ ಆಗುವ ಲಾಭವೇನು? ಬಹುಮತ ಇದೆ ಎನ್ನುವ ಒಂದೇ ಕಾರಣಕ್ಕೆ ಇಂತಹ ಕಾನೂನು ತರುವುದು ನಿಜಕ್ಕೂ ರಾಜ್ಯದ ಜನತೆಗೆ ಮಾಡುವ ಅನ್ಯಾಯ ಎಂದು ದೇವೇಗೌಡ ಹೇಳಿದರು.

ಅದೇ ರೀತಿಯಲ್ಲಿ ಎಪಿಎಂಸಿ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆ ತಿದ್ದುಪಡಿಯನ್ನು ಕೈಬಿಡಬೇಕು. ಇಲ್ಲವಾದರೆ ಸರಕಾರದ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಜೆಡಿಎಸ್ ರಾಜ್ಯಾದ್ಯಂತ ಹೋರಾಟ ನಡೆಸಲಿದೆ. ಜತೆಗೆ ನಾನೂ ಸ್ವತಃ ಬೀದಿಗೆ ಇಳಿದು ಹೋರಾಟ ಮಾಡಲಿದ್ದೇನೆ ಎಂದು ದೇವೇಗೌಡ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಜಗಜ್ಜಾಹೀರು: ಕೊರೋನ ಸೋಂಕಿನ ವಿಚಾರದಲ್ಲಿ ರಾಜ್ಯ ಸರಕಾರ ಎಷ್ಟು ಪ್ಯಾಕೇಜ್ ಬಿಡುಗಡೆ ಮಾಡಿದೆ, ಎಷ್ಟು ಹಣ ಪೋಲಾಗಿದೆ ಎಂಬುದು ಎಲ್ಲವೂ ಜಗಜ್ಜಾಹೀರಾಗಿದೆ. ಕೊರೋನ ವೈದ್ಯಕೀಯ ಉಪಕರಣಗಳ ಖರೀದಿ ಹಗರಣದಲ್ಲಿ 2 ಸಾವಿರ ಕೋಟಿ ರೂ.ಹಗರಣ ನಡೆದಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಇದರ ಬಗ್ಗೆ ಹೋರಾಟ ಮಾಡಬೇಕೋ ಬೇಡವೋ ಗೊತ್ತಾಗುತ್ತಿಲ್ಲ.

ಯಾರು ಭ್ರಷ್ಟಾಚಾರ ಮಾಡಿರುತ್ತಾರೋ ಅವರಿಗೇ ಮತ್ತೆ ಶಕ್ತಿ ಬರುತ್ತದೆ. ಇದಕ್ಕೆ ಇತಿಹಾಸದಲ್ಲಿ ಸಾಕ್ಷಿಗಳಿವೆ. ಹಾಗಂತ ನಾನು ಸುಮ್ಮನೆ ಕುಳಿತುಕೊಳ್ತೀನಿ ಎಂದು ಯಾರು ಭಾವಿಸಬೇಕಿಲ್ಲ. ಜನಸಾಮಾನ್ಯರ ವಿಚಾರದಲ್ಲಿ ಆಟವಾಡಿದರೆ ನಾನು ಸುಮ್ಮನೆ ಬಿಡುವುದಿಲ್ಲ. ಈಗಲಾದರೂ ಕೊರೋನ ಸೋಂಕಿನ ವಿಚಾರದಲ್ಲಿ ಸರಕಾರ ಎಚ್ಚೆತ್ತು ಕೆಲಸ ಮಾಡಲಿ ಎಂದು ದೇವೇಗೌಡ ತಮ್ಮದೇ ದಾಟಿಯಲ್ಲಿ ಸರಕಾರವನ್ನು ಎಚ್ಚರಿಸಿದರು.

ಮದ್ಯ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ತೆಗೆದಿದ್ದು ಯಾರು? ರಾಜಾಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ತೆಗೆಯುತ್ತಿರುವುದು ಯಾರು? ಎರಡೂ ರಾಷ್ಟ್ರೀಯ ಪಕ್ಷಗಳು ಜನತೆಯ ತೀರ್ಪು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಕೇವಲ ಅಧಿಕಾರ ಹಿಡಿಯುವುದೇ ಇವರಿಗೆ ಮುಖ್ಯ ಆಗಿದೆ ಎಂದು ದೇವೇಗೌಡ ಇದೇ ವೇಳೆ ಕಾಂಗ್ರೆಸ್-ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ಬಗ್ಗೆ ಮೃದು ಧೋರಣೆ ಹೊಂದಿಲ್ಲ. ಈ ಸರಕಾರ ಬರುವುದಕ್ಕೆ ಯಾರು ಕಾರಣ ಎಂಬುದು ಎಲ್ಲವು ರಾಜ್ಯದ ಜನತೆಗೆ ಗೊತ್ತಿದೆ. ಇದರ ಬಗ್ಗೆ ನಾನು ಮಾತನಾಡಲಿಕ್ಕೆ ಹೋಗುವುದಿಲ್ಲ. ಎಷ್ಟು ದಿನ ಸುಮ್ನೆ ಮಾತನಾಡುತ್ತಾ ಇರೋದು. ನಮ್ಮ ಪಕ್ಷವನ್ನು ಉಳಿಸೋದು ನಮ್ಮ ಗುರಿ. ನಾವು ಅಧಿಕಾರಕ್ಕೆ ಬರುತ್ತೇವೋ ಅಥವಾ ವಿಪಕ್ಷದಲ್ಲಿ ಇರುತ್ತೆವೋ ಅದು ಜನ ತೀರ್ಮಾನ ಮಾಡಬೇಕು. ಹಾಗೆಂದು ಜನತೆಗೆ ತೊಂದರೆಯಾದರೆ ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ ಎಂದು ದೇವೇಗೌಡ ಗುಡುಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News