ಸಂವಿಧಾನ, ಚಳವಳಿ, ಟಿಪ್ಪು ಪಠ್ಯ ಕೈಬಿಡಲು ರಾಜ್ಯ ಸರಕಾರ ನಿರ್ಧಾರ: ವಿದ್ಯಾರ್ಥಿ, ದಲಿತ, ಪ್ರಗತಿಪರ ಸಂಘಟನೆಗಳ ಆಕ್ಷೇಪ

Update: 2020-07-28 12:14 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.28: ರಾಜ್ಯ ಸರಕಾರ ಕೋವಿಡ್-19 ಹಿನ್ನೆಲೆಯಲ್ಲಿ ಪಠ್ಯಗಳನ್ನು ಕಡಿತಗೊಳಿಸುವ ನೆಪದಲ್ಲಿ ಆರರಿಂದ ಹತ್ತನೇ ತರಗತಿಯ ಸಮಾಜ ವಿಜ್ಞಾನ ವಿಷಯದಲ್ಲಿದ್ದ ಸಂವಿಧಾನ, ಮಹಿಳಾ, ದಲಿತ, ಕಾರ್ಮಿಕ ಚಳವಳಿ ಹಾಗೂ ಟಿಪ್ಪು ಸುಲ್ತಾನ್ ಸೇರಿದಂತೆ ಜನಪರ ಆಶಯಗಳನ್ನೊಳಗೊಂಡ ಪಾಠವನ್ನು ಕೈ ಬಿಡಲಾಗಿದೆ ಎಂದು ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆ, ದಲಿತ, ಪ್ರಗತಿಪರ ಸಂಘಟನೆಗಳ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ದಿನೇ ದಿನೇ ಏರಿಕೆ ಆಗುತ್ತಿರುವ ಕೋವಿಡ್ ನಿಯಂತ್ರಣ ಮಾಡಲು ಸಮಾಜದ ಎಲ್ಲ ಜನಸಮುದಾಯಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕೆಂದು ಹೇಳುವ ಸರಕಾರವೇ, ಇಂತಹ ಸಂದರ್ಭದಲ್ಲಿ ವಿಶ್ವಾಸಕ್ಕೆ ಧಕ್ಕೆ ತರುವ ರೀತಿಯಲ್ಲಿ ಟಿಪ್ಪು ಸುಲ್ತಾನ್ ಪಠ್ಯವನ್ನು ಕೈ ಬಿಡಲು ನಿರ್ಧರಿಸಿರುವುದು ಸಮಾಜದಲ್ಲಿ ಒಡಕನ್ನು ಉಂಟು ಮಾಡುವ ಪ್ರಯತ್ನದ ಭಾಗವಾಗಿದೆ ಎಂದು ವಿವಿಧ ಸಂಘಟನೆಗಳ ನಾಯಕರು ಆರೋಪಿಸಿದ್ದಾರೆ.

ಕೋವಿಡ್ ನೆಪದಲ್ಲಿ ಜನಪರ, ಸಮಾಜ ಪರವಾದ ಆಶಯಗಳನ್ನೊಳಗೊಂಡ ಪಠ್ಯಗಳನ್ನೇ ಕೈಬಿಡಲಾಗಿದೆ. ಸರಕಾರ ಕೈಬಿಟ್ಟಿರುವ ಪಠ್ಯಗಳನ್ನು ಒಮ್ಮೆ ಅವಲೋಕಿಸಿದರೆ ದುರದ್ದೇಶ ಪೂರ್ವಕವಾಗಿಯೇ ಸಂವಿಧಾನ, ಚಳವಳಿಗಳಿಗೆ, ಟಿಪ್ಪು ಸುಲ್ತಾನ್‍ಗೆ ಸಂಬಂಧಿಸಿದ ಪಠ್ಯಗಳನ್ನು ಕೈಬಿಟ್ಟಿರುವುದು ಗೋಚರವಾಗುತ್ತದೆ. ಸರಕಾರದ ಈ ನಿರ್ಧಾರವನ್ನು ದಲಿತ ಚಳವಳಿ ಖಂಡಿಸುತ್ತದೆ ಎಂದು ದಸಂಸ ಸಂಚಾಲಕ ಮಾವಳ್ಳಿ ಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಪಠ್ಯಗಳನ್ನು ಕಡಿತಗೊಳಿಸುವ ಕ್ರಮವು ಒಳ್ಳೆಯ ಕ್ರಮವಾಗಿದ್ದರೂ ಯಾವ ಪಠ್ಯಗಳನ್ನು ಕೈಬಿಡಬೇಕೆಂಬುದರ ಕುರಿತು ಒಂದು ಸಮಿತಿಯನ್ನು ರಚಿಸಿ, ಅಲ್ಲಿ ಕೂಲಂಕಷವಾಗಿ ಚರ್ಚಿಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಏಕಾಏಕಿ ಟಿಪ್ಪು ಸುಲ್ತಾನ್, ಸಂವಿಧಾನದಂತಹ ವಿಷಯಗಳನ್ನು ಕೈಬಿಡುವುದು ಒಳ್ಳೆಯ ಬೆಳವಣಿಗೆಯಲ್ಲವೆಂದು ಲೇಖಕ ಶ್ರೀಪಾದ್ ಭಟ್ ಆತಂಕ ವ್ಯಕ್ತಪಡಿಸಿದ್ದಾರೆ.

ಆರನೇ ತರಗತಿಯ ಪಠ್ಯದಿಂದ ಕೈಬಿಡಲಾಗಿರುವ ಪ್ರಮುಖ ವಿಷಯಗಳು

-ಸಮಾಜ ವಿಜ್ಞಾನ ವಿಷಯದಲ್ಲಿದ್ದ ಯೇಸು ಕ್ರಿಸ್ತನ ಜೀವನ-ಕ್ರೈಸ್ತ ಧರ್ಮ ಬೋಧನೆಗಳು, ಪ್ರವಾದಿ ಮುಹಮ್ಮದರ ಜೀವನ ಹಾಗೂ ಇಸ್ಲಾಮಿನ ಬೋಧನೆಗಳು.

-ಮೌರ್ಯರ ಆಡಳಿತ ಪದ್ಧತಿಯನ್ನು ಕೈಬಿಡಲಾಗಿದೆ.

-ಹೈ-ಕರ್ನಾಟಕ ವಿಮೋಚನಾ ಚಳವಳಿ ಕೈಬಿಡಲಾಗಿದೆ.

-ತುಳುನಾಡಿನ ಮತಧರ್ಮ, ವಾಸ್ತುಶಿಲ್ಪ ಮತ್ತು ಜನಪದ ಕೈಬಿಡಲಾಗಿದೆ.

ಏಳನೇ ತರಗತಿಯಲ್ಲಿ ಕೈಬಿಡಲಾಗಿರುವ ಪಠ್ಯಗಳು

-ದಲಿತ ಮತ್ತು ಮಹಿಳಾ ಚಳವಳಿಗಳನ್ನು ಹಾಗೂ ಪಂಚಾಯತ್ ರಾಜ್ಯ ವ್ಯವಸ್ಥೆ ಕೈಬಿಡಲಾಗಿದೆ.

-ರಾಣಿ ಅಬ್ಬಕ್ಕದೇವಿ, ಬಳ್ಳಾರಿ ಸಿದ್ದಮ್ಮ ಮತ್ತು ಉಮಬಾಯಿ ಕುಂದಾಪುರ ಇವರುಗಳನ್ನು ಕೈಬಿಡಲಾಗಿದೆ.

-ಕರ್ನಾಟಕ ಏಕೀಕರಣ ಆಂದೋಲನದಲ್ಲಿ ಪತ್ರಿಕೆ ಮತ್ತು ಸಾಹಿತ್ಯದ ಪಾತ್ರವನ್ನು ಕೈ ಬಿಡಲಾಗಿದೆ.

-ಸಂವಿಧಾನದ ಪ್ರಸ್ತಾವನೆ ಮತ್ತು ಜಾತ್ಯತೀತತೆ

-ಉತ್ತರ ಭಾರತದ ಭಕ್ತಿ ಪರಂಪರೆ, ಕಬೀರ್ ದಾಸರು, ತುಳಸಿದಾಸರು, ಸೂಫಿ ಪರಂಪರೆ.

-ಹೈದರಾಲಿ ಮತ್ತು ಟಿಪ್ಪು ಸುಲ್ತಾನ್‍ಗೆ ಸಂಬಂಧಿಸಿದ ಪಠ್ಯಗಳು

-ಮೊಗಲ್ ಸಾಂಸ್ಕೃತಿಕ ಕೊಡುಗೆಗಳು.

ರಾಜಾರಾಮ್ ಮೋಹನ್‍ರಾಯ್, ಜ್ಯೋತಿಬಾಪುಲೆ, ದಯಾನಂದ ಸರಸ್ವತಿ, ವಿವೇಕಾನಂದ, ನಾರಾಯಣಗುರು ಕುರಿತು ಕಲಿಕಾಂಶಗಳನ್ನು ಮಿತಿಗೊಳಿಸಲಾಗಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪಠ್ಯವನ್ನು ಲಭ್ಯವಿರುವ ಬೋಧನಾ ಅವಧಿಗೆ ಅನುಗುಣವಾಗಿ ಕಡಿತಗೊಳಿಸಲಾಗಿದೆ. ತರಗತಿವಾರು, ವಿಷಯವಾರು, ನಿಗದಿಯಾಗಿರುವ ಕಲಿಕಾಂಶಗಳು, ಕಲಿಕಾ ಸಾಮರ್ಥ್ಯಗಳು ಮತ್ತು ಭಾಷಾ ಕೌಶಲಗಳಿಗೆ ಯಾವುದೇ ಕೊರತೆಯಾಗದಂತೆ ಪಠ್ಯಗಳನ್ನು ಆಯ್ಕೆ ಮಾಡಲಾಗಿದೆ. ಡಿಎಸ್‍ಇಆರ್‍ಟಿ ವತಿಯಿಂದ 120 ದಿನಗಳಿಗೆ ಸೀಮಿತಗೊಳಿಸಿರುವ ಪಠ್ಯವನ್ನು ಆಧಾರದ ಮೇಲೆ ಪಠ್ಯಾಂಶಗಳನ್ನು ಕಡಿತಗೊಳಿಸಲಾಗಿದೆ.

-ಮಾದೇಗೌಡ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಪಠ್ಯಪುಸ್ತಕ ಸಂಘ

ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಪುಸ್ತಕ ರಚನಾ ಸಮಿತಿ ರಚಿಸಿರುವ ಪಠ್ಯಪುಸ್ತಕಗಳನ್ನು ಕೋವಿಡ್ ನೆಪದಲ್ಲಿ ಏಕಾಏಕಿ ಕಡಿತಗೊಳಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಪ್ರತಿ ಪಠ್ಯಗಳ ಅಳವಡಿಕೆಯ ಹಿಂದೆ ಸಾಕಷ್ಟು ಚರ್ಚೆ, ಚಿಂತನೆಗಳು ಇರುತ್ತವೆ. ಹೀಗಾಗಿ ಯಾವುದೇ ಪಠ್ಯಗಳನ್ನು ಕೈಬಿಡುವ ಮುನ್ನ ಶಿಕ್ಷಣ ತಜ್ಞರ, ಈ ಹಿಂದಿನ ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷರ ಅಭಿಪ್ರಾಯ, ಸಲಹೆ ಪಡೆಯುವುದು ಮುಖ್ಯ.

-ಪ್ರೊ.ನಿರಂಜನಾರಾಧ್ಯ, ಶಿಕ್ಷಣ ತಜ್ಞ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News