ಜು.30ರಂದು ಸಿಇಟಿ ಪರೀಕ್ಷೆ ನಡೆಸುವ ನಿರ್ಧಾರ ಮರುಪರಿಶೀಲಿಸಿ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2020-07-28 12:35 GMT

ಬೆಂಗಳೂರು, ಜು.28: ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಯನ್ನು ಜು.30ರಂದು ನಡೆಸಲು ನಿರ್ಧಾರ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ.

ಕೊರೋನ ಹಿನ್ನೆಲೆ ಕಂಟೈನ್ಮೆಂಟ್ ಝೋನ್‍ನಿಂದ ಕೆಲವರು ಹೊರ ಬರುವಂತಿಲ್ಲ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇದೆ. ಆದರೆ, ಸಾಕಷ್ಟು ಮಂದಿ ಹೊರ ರಾಜ್ಯದಿಂದಲೂ ಸಹ ಪರೀಕ್ಷೆಗೆ ಬರುತ್ತಿದ್ದಾರೆ. ಬೆಂಗಳೂರು ನಗರದಲ್ಲಿ 5 ಸಾವಿರಕ್ಕೂ ಹೆಚ್ಚು ಕಂಟೈನ್ಮೆಂಟ್ ಝೋನ್‍ಗಳಿವೆ. ರಾಜ್ಯ ಸರಕಾರದ ಕೊರೋನ ಎಸ್‍ಓಪಿಯ ಪ್ರಕಾರ ಇಲ್ಲಿರುವವರು ಹೊರಬರುವಂತಿಲ್ಲ. ಹಾಗಾದರೆ, ಕಂಟೈನ್ಮೆಂಟ್ ಝೋನ್‍ನಲ್ಲಿ ಇರುವವರು ಹೇಗೆ ಪರೀಕ್ಷೆ ಬರೆಯುತ್ತಾರೆ ಎಂದು ಸರಕಾರದ ಪರ ವಕೀಲರಿಗೆ ಹೈಕೋರ್ಟ್ ಪ್ರಶ್ನಿಸಿದೆ.

ಇದರಿಂದ, ಅನೇಕ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗುವ ಸಾಧ್ಯತೆ ಇದೆ. ಎಸೆಸೆಲ್ಸಿ ಪರೀಕ್ಷೆ ಬರೆಯುವವರಿಗೆ ಪೂರಕ ಪರೀಕ್ಷೆಗೆ ಅವಕಾಶವಿತ್ತು. ಆದರೆ, ಈಗ ಇವರಿಗೆ ಆ ಅವಕಾಶವೂ ಇಲ್ಲವಾಗಿದೆ. ಅಲ್ಲದೆ, ಕೊರೋನ ಪ್ರಕರಣಗಳು ದಿನೇ ದಿನೇ ರಾಜ್ಯದಲ್ಲಿ ಹೆಚ್ಚಾಗುತ್ತಿವೆ. ಅದರಲ್ಲೂ ಕಳೆದ ನಾಲ್ಕೈದು ದಿನಗಳಿಂದ ಪ್ರತಿ ದಿನ 5 ಸಾವಿರ ಕೇಸ್ ಪತ್ತೆಯಾಗುತ್ತಿವೆ. ಈಗಾಗಲೇ ಕೊರೋನ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಹೀಗಾಗಿ, ಪರೀಕ್ಷೆ ನಡೆಸುವ ನಿರ್ಧಾರವನ್ನು ಮರುಪರಿಶೀಲಿಸಿ ಎಂದು ರಾಜ್ಯ ಸರಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನ್ಯಾಯಪೀಠವು ಸೂಚನೆ ನೀಡಿದೆ. ಈ ಬಗ್ಗೆ ಜು.29ರಂದು ಉತ್ತರಿಸಲು ಹೇಳಿ ವಿಚಾರಣೆಯನ್ನು ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News