ಸಕಾಲದಲ್ಲಿ ಸಂಬಂಧಿಗೆ ಸಿಗದ ಚಿಕಿತ್ಸೆ: ವೈದ್ಯರ ವಿರುದ್ಧ ಚಿತ್ರನಟಿ ಸುಧಾರಾಣಿ ಅಸಮಾಧಾನ
ಬೆಂಗಳೂರು, ಜು.28: ಅಣ್ಣನ ಪುತ್ರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ ವೈದ್ಯರ ವಿರುದ್ಧ ಚಿತ್ರನಟಿ ಸುಧಾರಾಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಧಾರಾಣಿಯವರ ಅಣ್ಣನ ಪತ್ರಿಗೆ ಸೋಮವಾರ ರಾತ್ರಿ 10 ಗಂಟೆಯ ವೇಳೆಗೆ ಕಿಡ್ನಿಸ್ಟೋನ್ ಸಮಸ್ಯೆ ಕಾಣಿಸಿಕೊಂಡಿತ್ತು. ನಂತರ ತಲೆ ಸುತ್ತು ಬಂದು ಬಿದ್ದಿದ್ದಳು. ಕೂಡಲೇ ಅವರನ್ನು ಶೇಷಾದ್ರಿಪುರದ ಅಪೋಲೊ ಆಸ್ಪತ್ರೆಗೆ ಆಂಬುಲೆನ್ಸ್‍ನಲ್ಲಿ ಕರೆದೊಯ್ಯಲಾಗಿದೆ. ಇಲ್ಲಿ ಹಾಸಿಗೆ ಖಾಲಿ ಇಲ್ಲ, ವೆಂಟಿಲೇಟರ್ ಇಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ನಂತರ ಸುಮಾರು ಒಂದು ತಾಸುಕಾದರೂ ಸರಿಯಾಗಿ ಸ್ಪಂದಿಸಲಿಲ್ಲ. ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ಕರೆ ಮಾಡಿದ ನಂತರ ಆಸ್ಪತ್ರೆಗೆ ದಾಖಲಿಸಿಕೊಂಡರು ಎಂದು ಸುಧಾರಾಣಿ ತಿಳಿಸಿದ್ದಾರೆ.
ವೈದ್ಯರನ್ನು ದೇವರ ಸಮಾನ ಎನ್ನುತ್ತೇವೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಪರಿಸ್ಥಿತಿ ಬೇರೆಯೇ ಇದೆ. ವೈದ್ಯರ ಕಷ್ಟ ನಮಗೂ ಅರ್ಥ ಆಗುತ್ತದೆ. ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಎಲ್ಲ ಮುಂಜಾಗ್ರತೆ ತೆಗೆದುಕೊಳ್ಳಬೇಕು. ಆದರೆ, ಕೊರೋನ ಹೊರತು ಪಡಿಸಿ, ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು, ತುರ್ತುಚಿಕಿತ್ಸೆ ಅಗತ್ಯವಿದ್ದವರಿಗೆ ತಕ್ಷಣಕ್ಕೆ ಸ್ಪಂದಿಸಬೇಕಲ್ಲವೆ ಎಂದೂ ಸುಧಾರಾಣಿ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ನಟಿ ಸುಧಾರಾಣಿಯವರ ಸಂಬಂಧಿ ಆರೋಗ್ಯ ಸಮಸ್ಯೆಯಿಂದ ಶೇಷಾದ್ರಿಪುರದ ಆಸ್ಪತ್ರೆಗೆ ಬಂದಾಗ ಚಿಕಿತ್ಸೆ ನೀಡಲು ವಿಳಂಬ ಮಾಡಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಯಾರಿಗೇ ಆಗಲಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ಪರದಾಡಬಾರದು. ಆ ಆಸ್ಪತ್ರೆಯ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.