ಕೊರೋನ ಸೋಂಕಿತ ವ್ಯಕ್ತಿಯ ಕುಟುಂಬ- ಶಾಸಕ ಎಸ್.ಎ.ರಾಮದಾಸ್ ನಡುವೆ ವಾಗ್ವಾದ

Update: 2020-07-28 17:07 GMT
ಎಸ್.ಎ.ರಾಮದಾಸ್

ಮೈಸೂರು,ಜು.28: ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರನ್ನು ಕೊರೋನ ಸೋಂಕಿತ ವ್ಯಕ್ತಿಯ ಕುಟುಂಬವೊಂದು ತರಾಟೆಗೆ ತೆಗೆದುಕೊಂಡ ಪರಿಣಾಮ ಶಾಸಕ ರಾಮದಾಸ್ ಮತ್ತು ಕುಟುಂಬ ಸದಸ್ಯರ ನಡುವೆ ವಾಗ್ವಾದ ನಡೆದ ಘಟನೆ ಮೈಸೂರಿನಲ್ಲಿ ನಡೆಯಿತು.

ಕೆ.ಆರ್.ಕ್ಷೇತ್ರದ ಕೊರೋನ ನಿಯಂತ್ರಣದ ಉಸ್ತುವಾರಿ ವಹಿಸಿಕೊಂಡಿರುವ ಶಾಸಕ ರಾಮದಾಸ್ ನಗರದ ವಿದ್ಯಾರಣ್ಯಪುರಂ ವ್ಯಾಪ್ತಿಯಲ್ಲಿ ಸಂಚರಿಸಿ ಕೊರೋನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಈ ವೇಳೆ ಕೊರೋನ ಸೋಂಕಿತ ಕುಟುಂಬವೊಂದು 'ನಮ್ಮನ್ನು ನಿರ್ಲಕ್ಷಿಸಲಾಗಿದೆ. ನಮ್ಮ ಮನೆಯನ್ನು ಸೀಲ್ ಡೌನ್ ಮಾಡಿದ ನಂತರ ಯಾರೊಬ್ಬರು ನಮ್ಮ ಕಷ್ಟವನ್ನು ಕೇಳಿಲ್ಲ, ನಾವು ಎಲ್ಲಿಗೆ ಹೋಗಬೇಕು, ನಮ್ಮ ಮನೆಯಲ್ಲಿನ ಕಸವನ್ನು ತೆಗೆದುಕೊಂಡು ಹೋಗಲು ಪಾಲಿಕೆ ಪೌರಕಾರ್ಮಿಕರು ಬರುತ್ತಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮನ್ನು ಹೋಂ ಐಸೋಲೇಷನ್‍ನಲ್ಲಿ ಇಡಲಾಗಿದೆ. ನಮ್ಮ ಮನೆಯ ಸುತ್ತಾ ಸ್ಯಾನಿನಿಟೈಸ್ ಮಾಡಬೇಕು. ಅಂತಹ ಯಾವುದೇ ಕೆಲಸವನ್ನು ಮಾಡಿಲ್ಲ, ನಗರ ಪಾಲಿಕೆ ಸದಸ್ಯರು ಬಂದು ಹೋಗಿದ್ದಾರೆ. ನೀವು ಮಾತ್ರ ಬಂದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಇದರಿಂದ ಕೆರಳಿದ ಶಾಸಕ ಎಸ್.ಎ.ರಾಮದಾಸ್, ನಾನು ಕಳೆದ ನಾಲ್ಕು ತಿಂಗಳುಗಳಿಂದಲೂ ಕೊರೋನ ನಿಯಂತ್ರಣದ ಬಗ್ಗೆ ಹಗಲಿರುಳು ಶ್ರಮಿಸುತ್ತಿದ್ದೇನೆ. ನೀವು ಸುಖಾ ಸುಮ್ಮನೆ ಆರೋಪ ಮಾಡಬೇಡಿ, ನಿಮ್ಮನ್ನು ಯಾರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಹೇಳಿ. ಅವರ ಮೇಲೆ ಕ್ರಮ ಜರುಗಿಸುತ್ತೇವೆ. ಸುಮ್ಮನೆ ನಮ್ಮ ಮೇಲೆ ತಪ್ಪು ಭಾವನೆ ಬರುವ ರೀತಿ ನಡೆದುಕೊಳ್ಳಬೇಡಿ ಎಂದು ಮರುತ್ತರ ನೀಡಿದರು.

ಬಳಿಕ ಶಾಸಕ ಎಸ್.ಎ.ರಾಮದಾಸ್ ಸ್ಥಳದಲ್ಲಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News