ಪಠ್ಯದಿಂದ ಟಿಪ್ಪು ಇತಿಹಾಸ ತೆಗೆದು ಹಾಕಿರುವುದನ್ನು ಸರಕಾರ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ: ಎಸ್.ಡಿ.ಪಿ.ಐ.

Update: 2020-07-29 08:02 GMT

ಮೈಸೂರು, ಜು.29: ಶಾಲಾ ಪಠ್ಯದಿಂದ ಟಿಪ್ಪು ಇತಿಹಾಸವನ್ನು ತೆಗೆದು ಹಾಕಿರುವುದನ್ನು ರಾಜ್ಯ ಸರಕಾರ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಸ್.ಡಿ.ಪಿ.ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಎಚ್ಚರಿಕೆ ನೀಡಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೋನ ಸಂಕಷ್ಟದ ಕಾಲದಲ್ಲಿ ಜನರಿಗೆ ನೆರವಾಗುವಂತಹ ಕೆಲಸಗಳನ್ನು ಮಾಡುವುದನ್ನು ಬಿಟ್ಟು ಕೋಮುವಾದಿ ಅಜೆಂಡಾಗಳನ್ನು ಜಾರಿಗೆ ತರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಿಪ್ಪು ಈ ನಾಡಿನ ಹೆಮ್ಮೆ ಇಂತಹ ಮಹಾನ್ ನಾಯಕನ ಇತಿಹಾಸವನ್ನು ಪಠ್ಯಪುಸ್ತಕದಿಂದ ಕೈ ಬಿಡುವ ಮೂಲಕ ಕನ್ನಡ ನಾಡಿನ ಜನರಿಗೆ ಅಪಮಾನ ಮಾಡಿದ್ದಾರೆ. ಇತಿಹಾಸವನ್ನು ಯುವ ಪೀಳಿಗೆಗಳಿಗೆ ತಿಳಿಸುವುದು ನಮ್ಮ ಜವಾಬ್ದಾರಿ ಎಂದವರು ಹೇಳಿದರು.

ಟಿಪ್ಪು ಸುಲ್ತಾನ್ ಬಗೆಗಿನ ಇತಿಹಾಸವನ್ನು ನಾಶಮಾಡುವ ಕೆಲಸವನ್ನು ಬಿಜೆಪಿ ಈ ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದೆ. ಅದಕ್ಕೆ ಪೂರಕವಾಗಿ ಟಿಪ್ಪು ಜಯಂತಿ ರದ್ದುಪಡಿಸಲಾಯಿತು. ಪಠ್ಯದಿಂದ ಕೈಬಿಡುವುದಾಗಿ ಈ ಹಿಂದೆಯೇ ನಿರ್ಧಾರ ಮಾಡಿದ್ದರು. ಅದರ ಭಾಗವಾಗಿ ಹಂತ ಹಂತವಾಗಿ ಇಂತಹ ಕೆಲಸಗಳನ್ನು ಮಾಡುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಆಡಳಿತದಲ್ಲಿ ಎಂದೂ ಅವರು ಸಂವಿಧಾನಕ್ಕೆ ಬದ್ದವಾಗಿ ನಡೆದುಕಿಂಡು ಬಂದಿಲ್ಲ. ಅವರಿಗೆ ಅಂಬೇಡ್ಕರ್ ನೀಡಿದ ಸಂವಿಧಾನಕ್ಕಿಂತ ಮನುಧರ್ಮ ಸಂವಿಧಾನ ಜಾರಿಯಾಗಬೇಕು ಅದಕ್ಕಾಗಿ ಸಂವಿಧಾನ, ಚಳವಳಿ, ಅಂಬೇಡ್ಕರ್, ಟಿಪ್ಪು ಅಂತಹ ಇತಿಹಾಸವನ್ನು ತೆಗೆಯುವ ಕೆಲಸ ಮಾಡುತಿದ್ದಾರೆ ಎಂದು ಹರಿಹಾಯ್ದರು.

ದೇಶ ಸಂಕಷ್ಟದಲ್ಲಿರುವ ಸಮಯದಲ್ಲಿ ಹಿಂದೂ ರಾಷ್ಟ್ರ ಸಂವಿಧಾನ ಬದಲಾವಣೆ ಇವರ ಅಜೆಂಡಾ ಆಗಿದೆ. ದೇಶದ ಆರ್ಥಿಕ ಸ್ಥಿತಿ ಕುಸಿದಿದೆ. ನೋಟ್ ಬ್ಯಾನ್ ನಿಂದಾಗಿ ನಿರುದ್ಯೋಗ ಸೃಷ್ಟಿಯಾಗಿದೆ. ಮೈಸೂರು ಜಿಲ್ಲೆಯಲ್ಲಿ 19 ಲಕ್ಷ ಜನಸಂಖ್ಯೆ ಇದ್ದು, ಮೈಸೂರು ನಗರದಲ್ಲೆ 10 ಲಕ್ಷ ಜನಸಂಖ್ಯೆ ಇದೆ. ಆದರೆ ನಮ್ಮಲ್ಲಿ ಸರ್ಕಾರಿ, ಖಾಸಗಿ ಆಸ್ಪತ್ರೆ ಸೇರಿ 40 ವೆಂಟಿಲೇಟರ್ ಮಾತ್ರ ಇರುವುದು. ಇಂತಹ ಕೆಲಸಗಳನ್ನು ಮಾಡುವುದನ್ನು ಬಿಟ್ಟು ಕೋಮುವಾದಿ ನಿಲುವುಗಳನ್ನು ಕೈಗೊಳ್ಳುತ್ತಿದೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ತನ್ನ ನಿಲುವು ಬದಲಾಯಿಸದಿದ್ದರೆ ದಲಿತ ಸಂಘಟನೆ, ಪ್ರಗತಿಪರ ಸಂಘಟನೆ ಸೇರಿದಂತೆ ಇತರ ಸಂಘಟನೆಗಳೊಡಗೂಡಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಡಿ.ಪಿ.ಐ ರಾಜ್ಯ ಸಮಿತಿಯ ಸದಸ್ಯ ಅಮ್ಜದ್ ಖಾನ್, ಎಸ್.ಡಿ.ಪಿ.ಐ. ಮೈಸೂರು ಜಿಲ್ಲಾಧ್ಯಕ್ಷ ಮಕ್ಸೂದ್, ಎಸ್.ಡಿ.ಪಿ.ಐ. ಮೈಸೂರು ಜಿಲ್ಲಾ ಸದಸ್ಯ ಮುಹಮ್ಮದ್ ಝಹೀರ್ ಉಪಸ್ಥಿತರಿದ್ದರು.


ಕಾಂಗ್ರೆಸ್ ಪಕ್ಷ ಟಿಪ್ಪು ಸುಲ್ತಾನ್ ಹೆಸರು ಹೇಳಿಕೊಂಡು ಓಟ್ ಬ್ಯಾಂಕ್ ಗಾಗಿ ಮೊಸಳೆ ಕಣ್ಣೀರು ಸರಿಸುವುದು ಬೇಡ ಎಂದು ಎಸ್.ಡಿ.ಪಿ.ಐ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಹೀದ್ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷ  ಅಧಿಕಾರದಲ್ಲಿ ಇದ್ದಾಗ ಟಿಪ್ಪುವಿಗೆ ಕೊಟ್ಟ ಗೌರವ ಗೊತ್ತಿದೆ. ಬೆಂಗಳೂರಿನ ದೇವನಹಳ್ಳಿಯಲ್ಲಿ ಹುಟ್ಟಿದ ಟಿಪ್ಪು ಸುಲ್ತಾನ್ ಹೆಸರನ್ನು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡಬಹುದಾಗಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಆ ಕೆಲಸವನ್ನು ಮಾಡಲಿಲ್ಲ. ಈಗ ಓಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಟಿಪ್ಪುವನ್ನು ಬಳಸಿಕೊಳ್ಳುತ್ತಿದೆ ಎಂದು ಅವರು ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News