ಕೋಮುವಾದಿ ಪುಂಡರನ್ನು ರಕ್ಷಿಸಲು ದ.ಕ. ಜಿಲ್ಲಾಧಿಕಾರಿಯ ವರ್ಗಾವಣೆ: ಸಿದ್ದರಾಮಯ್ಯ ಆರೋಪ
ಬೆಂಗಳೂರು, ಜು. 29: ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರನ್ನು ವರ್ಗಾವಣೆ ಮಾಡಿರುವ ರಾಜ್ಯ ಸರಕಾರದ ಕ್ರಮಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದು, ಕೋಮುವಾದಿ ಪುಂಡರನ್ನು ರಕ್ಷಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, `ಕೊರೊನ ಅಕ್ರಮ ಬಯಲಿಗೆಳೆದರೆ ಅಧಿಕಾರಿಗಳ ನೈತಿಕಸ್ಥೈರ್ಯ ಕುಸಿಯುವಂತೆ ಮಾಡ್ತೀರಿ ಎಂದು ದೂರುತ್ತೀರಿ. ಮೊದಲು ಭ್ರಷ್ಟರ ರಕ್ಷಣೆಗಾಗಿ ಬಿಬಿಎಂಪಿ ಆಯುಕ್ತರ ವರ್ಗಾವಣೆ ಮಾಡಿದ್ದೀರಿ, ಈಗ ಕೋಮುವಾದಿ ಪುಂಡರ ರಕ್ಷಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಿದ್ದೀರಿ. ಇದೇನಾ ನಿಮ್ಮ ಕೊರೋನ ವಿರುದ್ಧದ ಹೋರಾಟ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
"ಶಹಬ್ಬಾಸ್, ಮುಖ್ಯಮಂತ್ರಿ ಯಡಿಯೂರಪ್ಪನವರೇ, ಒಂದೆಡೆ ಕೊರೋನ ವಾರಿಯರ್ಸ್ ಗೆ ಆಕಾಶದಿಂದ ಹೂಮಳೆ ಸುರಿಸುತ್ತೀರಿ, ಇನ್ನೊಂದೆಡೆ ಕೊಲೆ ಬೆದರಿಕೆ ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರಿಗೆ ರಕ್ಷಣೆ ನೀಡದೆ ವರ್ಗಾವಣೆ ಮಾಡ್ತೀರಿ. ಇದೇನಾ ಕೊರೋನ ವಾರಿಯರ್ಸ್ ಗೆ ಕೊಡುವ ಗೌರವ?' ಎಂದು ಟೀಕಿಸಿದ್ದಾರೆ.
ಜಾನುವಾರು ಸಾಗಾಟ ಮಾಡುವವರ ಮೇಲೆ ಹಲ್ಲೆ ನಡೆಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ರಿಗೆ ದುಷ್ಕರ್ಮಿಗಳು ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಿದ್ದರು. ನಿನ್ನೆ ದಿಢೀರ್ ಬೆಳವಣಿಗೆಯಲ್ಲಿ ಸಿಂಧೂ ರೂಪೇಶ್ ಅವರನ್ನು ವರ್ಗಾವಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಥಾನಕ್ಕೆ ಡಾ.ಕೆ.ವಿ.ರಾಜೇಂದ್ರ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿದ್ದು, ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
ಶಹಬ್ಬಾಸ್, @BSYBJP ಅವರೇ,
— Siddaramaiah (@siddaramaiah) July 29, 2020
ಒಂದೆಡೆ ಕೊರೊನಾ ವಾರಿಯರ್ಸ್ಗೆ ಆಕಾಶದಿಂದ ಹೂಮಳೆ ಸುರಿಸುತ್ತೀರಿ,
ಇನ್ನೊಂದೆಡೆ ಕೊಲೆ ಬೆದರಿಕೆ ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ರಕ್ಷಣೆ ನೀಡದೆ ವರ್ಗಾವಣೆ ಮಾಡ್ತೀರಿ.
ಇದೇನಾ ಕೊರೊನಾ ವಾರಿಯರ್ಸ್ಗೆ ಕೊಡುವ ಗೌರವ?
1/2 pic.twitter.com/Wnst5e1YdP