ಕೊರೋನ ರೋಗಿಗೆ 5 ಲಕ್ಷ ರೂ.ಬಿಲ್ ಮಾಡಿದ ಬೆಂಗಳೂರಿನ ಆಸ್ಪತ್ರೆ: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಡಾ.ಸುಧಾಕರ್

Update: 2020-07-29 12:46 GMT

ಬೆಂಗಳೂರು, ಜು. 29: `ಸರಕಾರದ ಆದೇಶವನ್ನು ಸಂಪೂರ್ಣವಾಗಿ ಗಾಳಿಗೆ ತೂರುತ್ತಿರುವ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ, ನಿಗದಿ ಮಾಡಿರುವ ದರಕ್ಕಿಂತಲೂ ಹೆಚ್ಚು ಹಣ ಪಡೆದಿದೆ. ಈ ವಿಷಯ ನನ್ನ ಗಮನಕ್ಕೆ ಬಂದಿದ್ದು ಆ ಖಾಸಗಿ ಆಸ್ಪತ್ರೆಯ ವಿರುದ್ಧ ಮುಲಾಜಿಲ್ಲದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, `ಬೆಂಗಳೂರಿನ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಗುತ್ತಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಅನೇಕ ಬಾರಿ ಆ ಆಸ್ಪತ್ರೆಗೆ ಎಚ್ಚರಿಕೆ ನೀಡಲಾಗಿದೆ. ಆದರೂ ಇಂದು ಕೊರೋನ ರೋಗಿಗೆ 5 ಲಕ್ಷ ರೂ.ಬಿಲ್ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿ ಆಘಾತವಾಯಿತು' ಎಂದು ಹೇಳಿದ್ದಾರೆ.

ಕೋವಿಡ್ ಟೆಸ್ಟ್ ಇಲ್ಲ: `ಕೋವಿಡ್ ಸೋಂಕಿತರನ್ನು 7 ದಿನಕ್ಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತಿದೆ ಎನ್ನುವ ಸುದ್ದಿ ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡುತ್ತೇನೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗೋ ವೇಳೆ ಕೈಗೆ ಸೀಲ್ ಹಾಕುತ್ತಿಲ್ಲ. ಹೋಂ ಐಸೋಲೇಷನ್‍ಗೆ ಹೋಗುವವರಿಗೆ ಕೈಗೆ ಸೀಲ್ ಹಾಕದೆ ಕಳುಹಿಸಲಾಗುತ್ತಿದೆ. ಕೋವಿಡ್ ಟೆಸ್ಟ್ ಮಾಡದೆ ಹೋಂ ಐಸೋಲೇಷನ್ ಮಾಡಲಾಗುತ್ತಿದೆ. ಹೋಂ ಐಸೋಲೇಷನ್‍ನಲ್ಲಿರೋರಿಗೆ ಕೋವಿಡ್ ಟೆಸ್ಟ್ ಮಾಡುವುದಿಲ್ಲ' ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಶ್ರದ್ಧಾಂಜಲಿ: ವಿಪಕ್ಷ ನಾಯಕ ಸಿದ್ದರಾಮಯ್ಯನವರ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯನವರು ನಮ್ಮನ್ನೆಲ್ಲ ಅಗಲಿ 4 ವರ್ಷಗಳೇ ಕಳೆದವು. ಅವರು ಇದ್ದಾಗ ಅವರ ಜೊತೆಗಿನ ಸ್ನೇಹ ಎಂದೂ ಮರೆಯಲು ಸಾಧ್ಯವಿಲ್ಲ. ಕೆಫೆ ಕಾಫಿ ಡೇ ಸಂಸ್ಥಾಪಕರು ಆತ್ಮೀಯರಾಗಿದ್ದ ವಿ.ಜಿ.ಸಿದ್ದಾರ್ಥ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ ಒಂದು ವರ್ಷವಾಯಿತು. ಅವರ ಅಗಲಿಕೆಯ ದುಃಖ ನಿಜಕ್ಕೂ ನನ್ನನ್ನು ಇನ್ನೂ ಕಾಡುತ್ತಿದೆ. ನಮ್ಮನ್ನೆಲ್ಲಾ ಬಿಟ್ಟು ಹೋಗಿರುವ ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ' ಎಂದು ಸುಧಾಕರ್ ಪ್ರತ್ಯೇಕ ಟ್ವೀಟ್ ಮೂಲಕ ಇಬ್ಬರಿಗೂ ನಮನ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News