ನಿಗದಿಯಂತೆ ಜು.30, 31ರಂದು ಸಿಇಟಿ ಪರೀಕ್ಷೆ ನಡೆಸಲು ಹೈಕೋರ್ಟ್ ಆದೇಶ

Update: 2020-07-29 16:17 GMT

ಬೆಂಗಳೂರು, ಜು.29: ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಿಗದಿಯಂತೆ ಜು.30 ಮತ್ತು 31ರಂದು ನಡೆಯಲಿದ್ದು, ಪರೀಕ್ಷೆಯನ್ನು ಮುಂದೂಡಬೇಕು ಎಂಬ ಮಧ್ಯಂತರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಎರಿಕ್ ಇ ಸ್ಟೀಫನ್ಸ್ ಮತ್ತು ಅಬ್ದುಲ್ ಮನ್ನಾನ್ ಖಾನ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ನಿಗದಿಪಡಿಸಿದಂತೆ ಎಲ್ಲ ಪರೀಕ್ಷಾರ್ಥಿಗಳಿಗೂ ಸರಕಾರ ಅವಕಾಶ ನೀಡಬೇಕು ಎಂದು ನಿರ್ದೇಶನ ನೀಡಿದೆ. 

ಯಾವುದೇ ನೆಪ ಹೇಳಿ ಪರೀಕ್ಷಾರ್ಥಿಗಳಿಗೆ ಅವಕಾಶ ನಿರಾಕರಿಸಬಾರದು. ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯಲು ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಬೇಕು. ಕೊರೋನ ಹಿನ್ನೆಲೆಯಲ್ಲಿ ಪೊಲೀಸರು ಕಂಟೈನ್ಮೆಂಟ್ ಜೋನ್ ವಿದ್ಯಾರ್ಥಿಗಳನ್ನು ತಡೆಯಬಾರದು ಎಂದು ನ್ಯಾಯಪೀಠವು ತಿಳಿಸಿದೆ. 

ಜೊತೆಗೆ ವಿದ್ಯಾರ್ಥಿಗಳೊಂದಿಗೆ ತೆರಳಲು ಪೋಷಕರಿಗೂ ಅವಕಾಶ ನೀಡಬೇಕು. ಸರಕಾರ ನ್ಯಾಯಪೀಠಕ್ಕೆ ಸಲ್ಲಿಸಿದ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕೆಇಎ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಬೇಕು ಹಾಗೂ ಪರೀಕ್ಷಾ ಕೇಂದ್ರದಲ್ಲಿ ಮೆಡಿಕಲ್ ವ್ಯವಸ್ಥೆ ಕಲ್ಪಿಸಬೇಕೆಂದು ನ್ಯಾಯಪೀಠವು ಸೂಚನೆ ನೀಡಿತು.

ರಾಜ್ಯದಲ್ಲಿ 2020ನೆ ಸಾಲಿನ ಸಿಇಟಿ ಪರೀಕ್ಷೆಗಳನ್ನು 2020ರ ಜು.30, 31 ಹಾಗೂ ಆ.1ಕ್ಕೆ ನಿಗದಿಪಡಿಸಲಾಗಿದೆ. ಕೊರೋನ ತುರ್ತು ಪರಿಸ್ಥಿತಿ ಪರಿಗಣಿಸಿ ಸಿಇಟಿ ಪರೀಕ್ಷೆ ಮುಂದೂಡುವಂತೆ ಸರಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದರು.

ಸಿಇಟಿಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೈಕೋರ್ಟ್ ನಿರ್ದೇಶನದಂತೆ ರಾಜ್ಯ ಸರಕಾರ ನಡೆದುಕೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಅಧಿಕಾರಿಗಳ ಸಭೆಯಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News