ರಾಜ್ಯದಲ್ಲಿ ಆ.1ರಿಂದ ರಾತ್ರಿ ಕರ್ಫ್ಯೂ ಇಲ್ಲ, ಶಾಲೆ-ಕಾಲೇಜು ಆಗಸ್ಟ್ 31ರವರೆಗೆ ತೆರೆಯುವಂತಿಲ್ಲ

Update: 2020-07-29 16:21 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು. 29: ಮಾರಕ ಕೊರೋನ ವೈರಸ್ ಸೋಂಕು ನಿಯಂತ್ರಣ ದೃಷ್ಟಿಯಿಂದ ಹೇರಿದ್ದ ಲಾಕ್‍ಡೌನ್ ಅನ್ನು ಮತ್ತಷ್ಟು ಸಡಿಲಿಸಿ, ರಾತ್ರಿ ವೇಳೆ ಸಾರ್ವಜನಿಕರ ಸಂಚಾರಕ್ಕೆ ಹೇರಿದ್ದ ನಿರ್ಬಂಧ ತೆರವುಗೊಳಿಸುವ ಮೂಲಕ ಆನ್‍ಲಾಕ್-3 ಮಾರ್ಗಸೂಚಿಯನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿಯೂ ಆನ್‍ಲಾಕ್-3 ಮಾರ್ಗಸೂಚಿ ಪ್ರಕಟಿಸಿರುವ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಆಗಸ್ಟ್ 1ರಿಂದ ನೂತನ ಮಾರ್ಗಸೂಚಿ ಜಾರಿಗೆ ಬರಲಿದ್ದು, ರಾತ್ರಿ ಕರ್ಫ್ಯೂ ತೆರವು ಮಾಡಲಾಗಿದೆ. ಜೊತೆಗೆ ಯೋಗ ಕೇಂದ್ರಗಳು, ಜಿಮ್(ವ್ಯಾಯಾಮ ಶಾಲೆ) ತೆರೆಯಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದ್ದಾರೆ.

ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲಾಗಿದ್ದು, ವ್ಯಕ್ತಿಗತ ಅಂತರವನ್ನು ಕಾಯ್ದುಕೊಂಡು, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸ್ವಾತಂತ್ರೋತ್ಸವ ಕಾರ್ಯಕ್ರಮ ಆಚರಿಸಲು ನಿರ್ದೇಶನ ನೀಡಲಾಗಿದೆ. ಕೊರೋನ ಸೋಂಕು ನಿಯಂತ್ರಣ ದೃಷ್ಟಿಯಿಂದ ಸರಕಾರದ ಮಾರ್ಗಸೂಚಿಯನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಆಗಸ್ಟ್ 31ರ ವರೆಗೆ ಶಾಲೆ-ಕಾಲೇಜು ಇಲ್ಲ: ಶಾಲೆ-ಕಾಲೇಜುಗಳನ್ನು ಆಗಸ್ಟ್ 31ರ ವರೆಗೆ ತೆರೆಯುವಂತಿಲ್ಲ. ತರಬೇತಿ ಸಂಸ್ಥೆಗಳು, ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭೆ-ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ. ಮೆಟ್ರೋ ರೈಲು, ಈಜುಕೊಳಗಳು, ಚಿತ್ರಮಂದಿರ, ಬಾರ್ ಸೇರಿದಂತೆ ಮನರಂಜನಾ ಪಾರ್ಕ್ ಗಳ ಮೇಲಿನ ನಿರ್ಬಂಧವನ್ನು ಆ.31ರ ವರೆಗೆ ಮುಂದುವರಿಸಿ ಆದೇಶ ಹೊರಡಿಸಲಾಗಿದೆ.

ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ `ಕಂಟೈನ್ಮೆಂಟ್ ಝೋನ್'ಗಳಲ್ಲಿ ಮೇಲ್ಕಂಡ ಸಡಿಲಿಕೆ ಯಾವುದೇ ಕಾರಣಕ್ಕೂ ಅನ್ವಯವಾಗುವುದಿಲ್ಲ. ಈ ವಲಯಗಳಲ್ಲಿ ಸೋಂಕಿನ ನಿಯಂತ್ರಣ ದೃಷ್ಟಿಯಿಂದ ಮತ್ತಷ್ಟು ನಿಗಾ ಮತ್ತು ನಿರ್ಬಂಧವನ್ನು ಮುಂದುವರಿಸಲು ರಾಜ್ಯ ಸರಕಾರಗಳಿಗೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶಿಸಿದ್ದು, ಕಟ್ಟುನಿಟ್ಟಿನ ಕ್ರಮ ವಹಿಸಲು ಆದೇಶದಲ್ಲಿ ಸೂಚಿಸಲಾಗಿದೆ.

ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು, ಮಕ್ಕಳು ಕಡ್ಡಾಯವಾಗಿ ಮನೆಗಳಲ್ಲಿಯೇ ಇರಬೇಕು. ಕಂಟೈನ್ಮೆಂಟ್ ಝೋನ್‍ಗಳಲ್ಲಿ 2020ರ ಆಗಸ್ಟ್ 31ರ ವರೆಗೆ ಲಾಕ್‍ಡೌನ್ ಇರಲಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಲರೂ ಮನೆಗಳಲ್ಲೇ ಇರಬೇಕು. ಅನಿವಾರ್ಯವಿದ್ದರಷ್ಟೇ ಮನೆಯಿಂದ ಹೊರಬರಬೇಕು. ಎಲ್ಲರೂ ತಪ್ಪದೆ ಮಾಸ್ಕ್ ಧರಿಸಬೇಕು. ಜೊತೆಗೆ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News