×
Ad

ಕೋವಿಡ್19 ಹಿನ್ನೆಲೆ: ಸರಳ ರೀತಿಯಲ್ಲಿ ಬಕ್ರೀದ್ ಆಚರಿಸಲು ರಾಜ್ಯ ವಕ್ಫ್ ಬೋರ್ಡ್ ಮನವಿ

Update: 2020-07-29 22:14 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.29: ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ನಮ್ಮ ರಾಜ್ಯದಲ್ಲಿ ಹಲವಾರು ಮಂದಿ ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದು, ಪರಿಸ್ಥಿತಿ ಇನ್ನು ಹತೋಟಿಗೆ ಬಂದಿಲ್ಲ. ಆದುದರಿಂದ, ರಾಜ್ಯದ ಮುಸ್ಲಿಮರು ಬಕ್ರೀದ್ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಬೇಕು ಎಂದು ರಾಜ್ಯ ವಕ್ಫ್ ಬೋರ್ಡ್ ಮನವಿ ಮಾಡಿದೆ.

ಜು.31ರಂದು ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಆ.1ರಂದು ಇನ್ನಿತರ ಜಿಲ್ಲೆಗಳಲ್ಲಿ ಬಕ್ರೀದ್ ಹಬ್ಬ ಆಚರಿಸಲಾಗುತ್ತಿದೆ. ತೆರೆದ ಸ್ಥಳಗಳಲ್ಲಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್ ನಿರ್ವಹಿಸುವುದನ್ನು ನಿರ್ಬಂಧಿಸಲಾಗಿದೆ. ಈದ್ ನಮಾಝ್ ಅನ್ನು ಮಸೀದಿಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಸಹಕಾರಿಯಾಗುವಂತೆ ಕನಿಷ್ಠ ಪ್ರಮಾಣದಲ್ಲಿ ಮುಸಲ್ಲಿಗಳನ್ನು ಒಳಗೊಂಡು ನಿರ್ವಹಿಸಬಹುದಾಗಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಸ್ಲಾಹುದ್ದೀನ್ ಗದ್ಯಾಲ್ ಆದೇಶದಲ್ಲಿ ತಿಳಿಸಿದ್ದಾರೆ.

ಖುತ್ಬಾ ಸೇರಿದಂತೆ ಈದ್ ನಮಾಝ್ ಅನ್ನು 15-20 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಮಸೀದಿಗಳಲ್ಲಿ ಈದ್ ನಮಾಝ್ ಬೆಳಗ್ಗೆ 8 ಗಂಟೆಯ ಒಳಗಾಗಿ ಪೂರ್ಣಗೊಳಿಸಬೇಕು. ಕೆಲವು ಮಸೀದಿಗಳ ಆಡಳಿತ ಸಮಿತಿಗಳು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಸೀದಿಗಳಲ್ಲಿ ಸಾಮೂಹಿಕ ನಮಾಝ್‍ಗಳನ್ನು ನಿರ್ಬಂಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಮಸೀದಿಗಳಲ್ಲಿ ಈದ್ ನಮಾಝ್‍ಗೆ ಅವಕಾಶ ಕಲ್ಪಿಸುತ್ತಿರುವ ಆಡಳಿತ ಸಮಿತಿಗಳು ಈ ಹಿಂದೆ ವಕ್ಫ್ ಬೋರ್ಡ್ ಸೂಚಿಸಿರುವ ಮಾರ್ಗಸೂಚಿಗಳಂತೆ ಮುಸಲ್ಲಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಪ್ರಾಣಿ ಬಲಿ(ಕುರ್ಬಾನಿ)ಯನ್ನು ನಿಗದಿತ ವಧಾಗಾರಗಳಲ್ಲಿ ನಿರ್ವಹಿಸಬೇಕು ಅಥವಾ ಸ್ವಚ್ಛತೆಯಿಂದ ಕೂಡಿರುವ ಸ್ಥಳಗಳಲ್ಲಿ ನಿರ್ವಹಿಸಬಹುದು ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ, ತೆರೆದ ಜಾಗಗಳಲ್ಲಿ ಹಾಗೂ ಸಮುದಾಯ ಭವನಗಳಲ್ಲಿ ಪ್ರಾಣಿ ಬಲಿ ನೀಡಲು ಅವಕಾಶವಿಲ್ಲ. ಪ್ರಾಣಿ ಬಲಿ ನೀಡಿದಾಗ ಉತ್ಪತ್ತಿಯಾಗುವ ತ್ಯಾಜ್ಯವನ್ನು ಆದಷ್ಟು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಇಸ್ಲಾಹುದ್ದೀನ್ ಗದ್ಯಾಲ್ ಸೂಚನೆ ನೀಡಿದ್ದಾರೆ.

ಸಮುದಾಯ ಭವನಗಳು, ಶಾದಿಮಹಲ್‍ಗಳು ಹಾಗೂ ತೆರೆದ ಜಾಗಗಳಲ್ಲಿ ಸಾಮೂಹಿಕ ನಮಾಝ್ ನಿರ್ವಹಿಸಲು ಅವಕಾಶವಿಲ್ಲ. ರಾಜ್ಯದ ಎಲ್ಲ ವಕ್ಫ್ ಅಧಿಕಾರಿಗಳು, ಜಿಲ್ಲಾ ವಕ್ಫ್ ಸಲಹಾ ಸಮಿತಿಗಳು ಈ ಆದೇಶದ ಅನುಷ್ಠಾನವನ್ನು ಎಲ್ಲ ಮಸೀದಿಗಳು ಹಾಗೂ ಈದ್ಗಾ ಆಡಳಿತ ಸಮಿತಿಗಳು ಚಾಚುತಪ್ಪದೆ ಪಾಲಿಸುವಂತೆ ಗಮನ ಹರಿಸಬೇಕು. ವಕ್ಫ್ ಬೋರ್ಡ್ ಆದೇಶದ ಉಲ್ಲಂಘನೆಯಾದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಇಸ್ಲಾಹುದ್ದೀನ್ ಗದ್ಯಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News