ಕೊರೋನ ನೆಪದಲ್ಲಿ ಹೆಚ್ಚುವರಿ ಹಣ ವಸೂಲಿ; ದೂರುಗಳಿಗೆ ಸ್ಪಂದಿಸಿದ ಐಎಎಸ್, ಐಪಿಎಸ್ ಅಧಿಕಾರಿಗೆ ಮೆಚ್ಚುಗೆ
ಬೆಂಗಳೂರು, ಜು.29: ಕೊರೋನ ಸೋಂಕಿನ ನೆಪವನ್ನೇ ಬಂಡವಾಳ ಮಾಡಿಕೊಂಡು ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿದ ಐಎಎಸ್ ಅಧಿಕಾರಿ ಹರ್ಷ ಗುಪ್ತ ಹಾಗೂ ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ತಂಡಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊರೋನ ಸೋಂಕಿನ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮುಂಗಡವಾಗಿ ಪಡೆದಿದ್ದ ಲಕ್ಷಾಂತರ ರೂ. ಹಣವನ್ನು ವಾಪಸ್ ಕೊಡಿಸಿರುವುದಷ್ಟೇ ಅಲ್ಲ, ರೋಗಿಗಳ ಚಿಕಿತ್ಸಾ ವೆಚ್ಚವನ್ನೂ ಸರಕಾರದಿಂದಲೇ ಪಡೆಯಿರಿ ಎಂದು ಖಾಸಗಿ ಆಸ್ಪತ್ರೆಗಳಿಗೆ ತಾಕೀತು ಮಾಡುವ ಮೂಲಕ, ಕೊರೋನ ಸಂತ್ರಸ್ತರಿಗೆ ಹಾಗೂ ಅವರ ಬಡ ಕುಟುಂಬ ವರ್ಗಕ್ಕೆ ಅಧಿಕಾರಿಗಳು ನೆರವಿಗೆ ನಿಂತಿದ್ದಾರೆ.
ಇತ್ತೀಚಿಗಷ್ಟೇ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರ ಮಾರ್ಗದರ್ಶನದಲ್ಲಿ ರಚನೆಯಾಗಿರುವ 7 ತಂಡಗಳ ಪೈಕಿ 1 ತಂಡವನ್ನು ಹರ್ಷಗುಪ್ತ ಅವರು ಮುನ್ನಡೆಸುತ್ತಿದ್ದು, ಆ ತಂಡದಲ್ಲಿ ಅತಿ ಮುಖ್ಯ ಪಾತ್ರವನ್ನು ರೂಪಾ ಅವರು ವಹಿಸಿದ್ದಾರೆ. ಕೊರೊನ ಸೋಂಕಿತರಿಗೆ ಆಸ್ಪತ್ರೆ ಬಿಲ್ ಹೊರೆಯಾಗದಂತೆ ನೋಡಿಕೊಳ್ಳುವ ಮೂಲಕ, ಈ ಅಧಿಕಾರಿಗಳು ತಮ್ಮ ಜನಪರ ಕಾಳಜಿಯನ್ನು ಪ್ರದರ್ಶಿಸಿದ್ದಾರೆ.
ಅಧಿಕ ಶುಲ್ಕ ವಿಧಿಸಿದ ಆಸ್ಪತ್ರೆಗಳ ಮೇಲೆ ಅಧಿಕಾರಿಗಳ ದಾಳಿ, 24 ಲಕ್ಷ ರೂ. ಮರಳಿಸಲು ತಾಕೀತು ನೀಡಿರುವ ಈ ತಂಡಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನೂ, ಖಾಸಗಿ ಆಸ್ಪತ್ರೆಗಳೂ ಕೂಡಾ ಅಧಿಕಾರಿಗಳ ಮನವಿಗೆ ಸ್ಪಂದಿಸಿರೋದಕ್ಕೆ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಟ್ವಿಟ್ಟರ್ ನಲ್ಲಿ ಧನ್ಯವಾದ ಅರ್ಪಿಸಿದ್ದಾರೆ.