ದ.ಕ.ಜಿಲ್ಲೆಯ ಕಾನೂನು ವ್ಯವಸ್ಥೆಯನ್ನು ಕ್ರಿಮಿನಲ್‌ಗಳ ಕೈಗೊಪ್ಪಿಸಿದವರು

Update: 2020-07-30 06:41 GMT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ಜಿಲ್ಲೆಯ ಕಾನೂನು ವ್ಯವಸ್ಥೆ ಯಾರ ಹಿಡಿತದಲ್ಲಿದೆ ಎನ್ನುವುದನ್ನು ಬಯಲುಗೊಳಿಸಿದೆ. ಇಲ್ಲಿನ ಜಿಲ್ಲಾಧಿಕಾರಿಯವರು ದುಷ್ಕರ್ಮಿಗಳಿಗೆ ‘ಕಾನೂನು ಕೈಗೆತ್ತಿಕೊಳ್ಳದಂತೆ’ ಎಚ್ಚರಿಕೆ ನೀಡಿದರೆ, ಅವರಿಗೆ ಬಹಿರಂಗ ಕೊಲೆ ಬೆದರಿಕೆಗಳು ಬರುತ್ತವೆ ಮಾತ್ರವಲ್ಲ, ಆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ ಎರಡೇ ದಿನಗಳಲ್ಲಿ ವರ್ಗಾವಣೆಯಾಗುತ್ತಾರೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹೊಣೆಗಾರಿಕೆಯನ್ನು ಹೊತ್ತ ಜಿಲ್ಲಾಧಿಕಾರಿಗೆ ಬೆಂಬಲವಾಗಿ ನಿಲ್ಲಬೇಕಾದ ಜನಪ್ರತಿನಿಧಿಗಳು ಯಾವುದೇ ಪ್ರತಿಕ್ರಿಯೆ ನೀಡದೆ, ವೌನವಾಗಿ ದುಷ್ಕರ್ಮಿಗಳ ಬೆಂಬಲಕ್ಕೆ ನಿಲ್ಲುತ್ತಾರೆ. ಈ ಬೆಳವಣಿಗೆ ಸಂಘಪರಿವಾರವೆನ್ನುವುದು ಪೊಲೀಸ್ ಇಲಾಖೆಯ ಅಧಿಕೃತವಾದ ಒಂದು ಉಪಶಾಖೆಯೇ ಎಂಬ ಪ್ರಶ್ನೆಯನ್ನು, ಆತಂಕವನ್ನು ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಹುಟ್ಟಿಸಿ ಹಾಕಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಇತ್ತೀಚೆಗೆ ಅಧಿಕಾರಿಗಳ ಅಧಿಕೃತ ಸಭೆಯೊಂದನ್ನು ಕರೆದಿದ್ದರು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಶಾಂತಿ ನೆಲೆಸುವಂತೆ ಮಾಡುವುದು ಆ ಸಭೆಯ ಉದ್ದೇಶವಾಗಿತ್ತು. ಈಗಾಗಲೇ ಕೊರೋನ, ಲಾಕ್‌ಡೌನ್ ಇತ್ಯಾದಿಗಳಿಂದ ತತ್ತರಿಸಿರುವ ಜಿಲ್ಲೆಯಲ್ಲಿ ಯಾವುದೇ ನೆಪದಲ್ಲಿ ಅಶಾಂತಿ ಭುಗಿಲೆದ್ದರೂ ಅದರ ನೇರ ಫಲಾನುಭವಿಗಳು ಜನಸಾಮಾನ್ಯರು. ಆದುದರಿಂದಲೇ ಈ ಸಭೆ ಮಹತ್ವವನ್ನು ಪಡೆದಿತ್ತು. ಈ ಸಭೆಯ ಬಳಿಕ ಜಿಲ್ಲಾಧಿಕಾರಿ ಎರಡು ಮುಖ್ಯ ಆದೇಶಗಳನ್ನು ನೀಡಿದರು. ಅದರಲ್ಲಿ ಒಂದು ಆದೇಶ ‘ಅಕ್ರಮವಾಗಿ, ಕಾನೂನು ವಿರುದ್ಧ ಗೋಸಾಗಣೆ ಮಾಡುವವರ’ ವಿರುದ್ಧವಾಗಿತ್ತು. ‘ಬಕ್ರೀದ್ ಹಿನ್ನೆಲೆಯಲ್ಲಿ ಅನಧಿಕೃತ ಕಸಾಯಿಖಾನೆಗಳು ಕಾರ್ಯಾಚರಣೆ ಮಾಡಬಾರದು. ಕಾನೂನನ್ನು ಮೀರಿ ಅಕ್ರಮವಾಗಿ ಗೋಸಾಗಾಟ, ಗೋವುಗಳ ಹತ್ಯೆ ಮಾಡಿದರೆ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎನ್ನುವುದು ಈ ಆದೇಶದ ಸಾರಾಂಶವಾಗಿತ್ತು. ಇದೇ ಸಂದರ್ಭದಲ್ಲಿ ಇನ್ನೊಂದು ಆದೇಶ ನಕಲಿ ಗೋರಕ್ಷಕರ ವಿರುದ್ಧವಾಗಿತ್ತು.

‘‘ಯಾವುದೇ ಜಾನುವಾರುಗಳ ಸಾಗಾಟವನ್ನು ತಡೆದು ದಾಂಧಲೆ, ಹಲ್ಲೆ ನಡೆಸುವುದು ಅಪರಾಧವಾಗಿದೆ. ಅಕ್ರಮಗಳು ಕಂಡರೆ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಬೇಕು. ಅದರ ಬದಲಿಗೆ ಯಾರಾದರೂ ಸ್ವತಃ ಕಾನೂನು ಕೈಗೆತ್ತಿಕೊಂಡರೆ, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು’’ ಎಂಬ ಎಚ್ಚರಿಕೆಯ ಸಂದೇಶವನ್ನು ಅವರು ನಕಲಿ ಗೋರಕ್ಷಕರಿಗೆ ನೀಡಿದ್ದರು. ಈ ಎರಡನೆಯ ಆದೇಶದ ಹೊರಬೀಳುತ್ತಿದ್ದಂತೆಯೇ, ಕಾನೂನು ಕೈಗೆತ್ತಿಕೊಳ್ಳುವ ತಮ್ಮ ‘ಹಕ್ಕಿಗಾಗಿ ಸಂಘಪರಿವಾರ ದುಷ್ಕರ್ಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಚೀರಾಡತೊಡಗಿದರು. ಜಿಲ್ಲಾಧಿಕಾರಿಯ ವಿರುದ್ಧ ಟೀಕೆಗಳು ಮಾತ್ರವಲ್ಲ, ನಿಂದನೆಗಳು,ಜೀವಬೆದರಿಕೆಗಳು ಕೇಳಿ ಬಂತು. ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ, ಜೀವ ಬೆದರಿಕೆ ಒಡ್ಡಿದ್ದ ಆರೋಪಿಯನ್ನು ಬಂಧಿಸಿದ್ದಾರಾದರೂ, ಇಲ್ಲಿ ಪ್ರಶ್ನೆ ಜಿಲ್ಲಾಧಿಕಾರಿಯ ವಿರುದ್ಧದ ಜೀವಬೆದರಿಕೆಯಷ್ಟೇ ಅಲ್ಲ. ಜಿಲ್ಲಾಡಳಿತ ‘ಕಾನೂನು ಕೈಗೆತ್ತಿಕೊಂಡರೆ ಎಚ್ಚರಿಕೆ’ ಎಂದರೆ ಅದನ್ನು ವಿರೋಧಿಸಿ ಬಹಿರಂಗವಾಗಿ ಜೀವ ಬೆದರಿಕೆ ಒಡ್ಡುವಷ್ಟು ಸಂಘಪರಿವಾರದ ದುಷ್ಕರ್ಮಿಗಳು ಬೆಳೆದಿದ್ದಾರೆ ಎಂದರೆ, ಅದಕ್ಕೆ ಕಾರಣರಾರು? ಎನ್ನುವ ಬಗ್ಗೆ ನಾವು ಚರ್ಚೆ ನಡೆಸಬೇಕಾಗಿದೆ.

‘ನಕಲಿ ಗೋರಕ್ಷಕರು’ ಎಂದರೆ ಹಫ್ತ್ತಾ ವಸೂಲಿಗಾರರ ಇನ್ನೊಂದು ವೇಷ ಎನ್ನುವುದರಲ್ಲಿ ಎರಡು ಮಾತಿಲ್ಲ. ಗೋರಕ್ಷಕರ ವೇಷದಲ್ಲಿರುವ ಇವರು ಗೋವುಗಳನ್ನು ಸಾಕಿದವರಲ್ಲ. ಗೋವುಗಳ ಜೊತೆಗೆ ಯಾವ ಮಾನಸಿಕ ಬಂಧವನ್ನು ಇವರು ಹೊಂದಿಲ್ಲ. ಗೋವುಗಳನ್ನು ಸಾಕಿ ಅದರ ಹಾಲು ಮಾರಿ ಜೀವಿಸುವ ಜನರಿಗೆ ಇವರು ತಲೆನೋವಾಗಿದ್ದಾರೆಯೇ ಹೊರತು, ಇವರಿಂದ ಅವರಿಗೆ ಯಾವುದೇ ರೀತಿಯ ಲಾಭವೂ ಆಗಿಲ್ಲ. ಬಡ ರೈತರು ಸಾಕಿದ ದನಗಳನ್ನು ಮಾರಲು ಬಿಡದೆ, ಬೆದರಿಸಿ ಅವನ್ನು ಅಕ್ರಮವಾಗಿ ವಶಪಡಿಸಿ ಗೋಶಾಲೆಗೆ ಸೇರಿಸುವ ಹೆಸರಿನಲ್ಲಿ ಗುಟ್ಟಾಗಿ ಕಸಾಯಿಖಾನೆಗೆ ಮಾರಿ ಹಣ ಮಾಡುವ ದಂಧೆ ನಡೆಸುವ ಕುರಿತಂತೆ ಇವರ ಮೇಲೆ ವ್ಯಾಪಕ ಆರೋಪಗಳಿವೆ. ಇದೇ ಸಂದರ್ಭದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ, ಗೋಸಾಗಾಟಗಾರರ ಮೇಲೆ ದಾಳಿ ನಡೆಸಿ ಅವರಿಂದ ಹಣ, ಮೊಬೈಲ್‌ಗಳನ್ನು ದೋಚುವುದು ಇವರ ಇನ್ನೊಂದು ಕಾಯಕವಾಗಿದೆ. ಗೋರಕ್ಷಕರ ವೇಷದಲ್ಲಿರುವ ಬಹುತೇಕರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ. ಈ ಹಿಂದೆ ಗೂಂಡಾಗಳೆಂದು ಸಮಾಜದಿಂದ ತಿರಸ್ಕೃತರಾದವರೆಲ್ಲ ಇಂದು ‘ಗೋರಕ್ಷಕರ’ ಫ್ಯಾನ್ಸಿಡ್ರೆಸ್‌ನಲ್ಲಿ ಸಮಾಜದಲ್ಲಿ ಸಕ್ರಮವಾಗುವುದಕ್ಕೆ ಯತ್ನಿಸುತ್ತಿದ್ದಾರೆ. ಪೊಲೀಸರೇನಾದರೂ ಇವರ ಮೇಲೆ ಕ್ರಮ ತೆಗೆದುಕೊಂಡರೆ, ಧರ್ಮ, ಸಂಸ್ಕೃತಿ ಮೊದಲಾದ ಮುಖವಾಡಗಳ ಮೂಲಕ ರಕ್ಷಣೆ ಪಡೆಯುತ್ತಾರೆ. ಇವರೆಲ್ಲರೂ ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಫಲಾನುಭವಿಗಳು. ಈ ಕಾರಣದಿಂದಲೇ ಇವರು ಕಾನೂನು ಸುವ್ಯವಸ್ಥೆಗೆ ಅತಿ ದೊಡ್ಡ ಸವಾಲಾಗಿದ್ದಾರೆ.

ತಮ್ಮ ಬೆನ್ನ ಹಿಂದೆ ರಾಜಕೀಯ ನಾಯಕರಿದ್ದಾರೆ ಎನ್ನುವ ಹುಂಬ ಧೈರ್ಯದಿಂದಲೇ ‘ಕಾನೂನು ಕೈಗೆತ್ತಿಕೊಳ್ಳಬೇಡಿ’ ಎಂದು ಎಚ್ಚರಿಸಿದ ಜಿಲ್ಲಾಧಿಕಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಜೀವ ಬೆದರಿಕೆಯೊಡ್ಡಿದ್ದಾರೆ. ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ದುಷ್ಕರ್ಮಿಗಳು ಅಪಹರಿಸದಂತೆ ನೋಡಿಕೊಳ್ಳುವುದು ಕೇವಲ ಜಿಲ್ಲಾಧಿಕಾರಿಯೊಬ್ಬರ ಹೊಣೆಗಾರಿಕೆಯಲ್ಲ. ಜನರಿಂದ ಮತ ಪಡೆದು ಗೆದ್ದ ಜನಪ್ರತಿನಿಧಿಗಳಿಗೂ ಹೊಣೆಗಾರಿಕೆಗಳಿವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹೊರಟ ಜಿಲ್ಲಾಧಿಕಾರಿಗೆ ಜೀವ ಬೆದರಿಕೆ ಬಂದಾಗ ತಕ್ಷಣ ಜನಪ್ರತಿನಿಧಿಗಳು ಪ್ರತಿಕ್ರಿಯಿಸಬೇಕು. ಜಿಲ್ಲಾಧಿಕಾರಿಯ ಬೆಂಬಲಕ್ಕೆ ನಿಲ್ಲಬೇಕು. ಆದರೆ ಜನಪ್ರತಿನಿಧಿಗಳು ವೌನ ಪಾಲಿಸುವ ಮೂಲಕ ಪರೋಕ್ಷವಾಗಿ ದುಷ್ಕರ್ಮಿಗಳನ್ನು ಬೆಂಬಲಿಸಿದ್ದಾರೆ. ವಿಪರ್ಯಾಸವೆಂದರೆ, ಆದೇಶ ನೀಡಿದ ಎರಡೇ ದಿನಗಳಲ್ಲಿ ಜಿಲ್ಲಾಧಿಕಾರಿಯ ವರ್ಗಾವಣೆಯಾಗಿದೆ. ಈ ಅನಿರೀಕ್ಷಿತ ವರ್ಗಾವಣೆಗೆ ಜಿಲ್ಲಾಧಿಕಾರಿಯ ಕರ್ತವ್ಯ ಪರತೆಯೇ ಕಾರಣ ಎಂದು ಜನರು ಸಂಶಯಿಸುತ್ತಿದ್ದಾರೆ. ಹಾಗಾದರೆ ರಾಜಕೀಯ ನಾಯಕರು ಜಿಲ್ಲೆಯಲ್ಲಿ ಕಾನೂನುಸುವ್ಯವಸ್ಥೆಯ ಅಗತ್ಯವಿಲ್ಲ ಎಂದು ಭಾವಿಸಿದ್ದಾರೆಯೇ? ಅಥವಾ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ದುಷ್ಕರ್ಮಿಗಳ ಕೈಗೆ ಇವರು ಒಪ್ಪಿಸಿದ್ದಾರೆಯೆ?

ಇದಕ್ಕೆ ಪುಷ್ಟಿಕೊಡುವಂತೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲೊಂದು ಘಟನೆ ನಡೆದಿದೆ. ತಾಲೂಕಿನಲ್ಲಿ ಗೋಕಳ್ಳತನ, ಅಕ್ರಮ ಗೋಸಾಗಾಟ ತಡೆಯುವ ಬಗ್ಗೆ ಬೆಳ್ತಂಗಡಿ ಶಾಸಕ ನಡೆಸಿದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಪೊಲೀಸರ ಜೊತೆಗೇ ಸಂಘಪರಿವಾರ ಮುಖಂಡರು ಭಾಗವಹಿಸಿರುವುದು ಸುದ್ದಿಯಾಗಿದೆ. ಅಕ್ರಮ ಗೋಸಾಗಾಟ ತಡೆಯುವ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸಂಘಪರಿವಾರದ ನಕಲಿ ಗೋರಕ್ಷಕರಿಗೇನು ಕೆಲಸ? ಈ ಸಭೆಯಲ್ಲಿ ಭಾಗವಹಿಸಿದ ಸಂಘಪರಿವಾರ ಮುಖಂಡರಲ್ಲಿ ಹಲವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. ಪೊಲೀಸರಿಗೆ ಸರಿಸಮವಾಗಿ ಸಭೆಯಲ್ಲಿ ಇವರನ್ನು ಕರೆಸಿಕುಳ್ಳಿರಿಸುವ ಮೂಲಕ ಶಾಸಕರು, ಕಾನೂನು ವ್ಯವಸ್ಥೆಗೆ ಮತ್ತು ಪೊಲೀಸರ ಘನತೆಗೆ ಧಕ್ಕೆ ತಂದಿದ್ದಾರೆ. ಪೊಲೀಸರ ನೈತಿಕ ಶಕ್ತಿಯನ್ನು ಈ ಮೂಲಕ ಕುಗ್ಗಿಸಿದ್ದಾರೆ. ಜೈಲಲ್ಲಿರಬೇಕಾದವರು ಶಾಸಕರ ಸಭೆಯಲ್ಲಿ ಬಂದು ಪೊಲೀಸರಿಗೆ ಸರಿಸಮವಾಗಿ ಕೂರುತ್ತಾರೆ ಎಂದರೆ, ಅವರು ತಮ್ಮ ತಾಲೂಕನ್ನು ಯಾವ ದಿಕ್ಕಿಗೆ ಕರೆದೊಯ್ಯಲು ಹೊರಟಿದ್ದಾರೆ?. ಕುರಿ ಕಾಯುವ ಕೆಲಸವನ್ನು ತೋಳಗಳ ಕೈಗೆ ಕೊಟ್ಟಂತೆಯೇ ಇದು. ಈ ಎಲ್ಲ ಬೆಳವಣಿಗೆಗಳು ಹೇಗೆ ಸಂಘಪರಿವಾರದ ದುಷ್ಕರ್ಮಿಗಳು ಪೊಲೀಸ್ ಇಲಾಖೆಯ ಜೊತೆಗೆ ಅನೈತಿಕ ಬಂಧವನ್ನು ಹೊಂದಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸುತ್ತವೆ. ಹೀಗಿರುವಾಗ ದ.ಕ.ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ನಿರೀಕ್ಷಿಸುವುದಾದರೂ ಹೇಗೆ ಸಾಧ್ಯ? ಹೊಸದಾಗಿ ಬಂದ ಜಿಲ್ಲಾಧಿಕಾರಿಯಾದರೂ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಧೈರ್ಯ ತೋರುವುದು ಹೇಗೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News