ಭ್ರಷ್ಟಾಚಾರ ಮಾಡಿದ ದಾಖಲೆ ಬಿಡುಗಡೆ ಮಾಡಿದರೆ ರಾಜಕೀಯ ನಿವೃತ್ತಿ: ಈಶ್ವರಪ್ಪಗೆ ಎಚ್.ಡಿ.ರೇವಣ್ಣ ಸವಾಲು

Update: 2020-07-29 18:08 GMT

ಹಾಸನ, ಜು.29: ನಾನು ಭ್ರಷ್ಟಾಚಾರ ಮಾಡಿರುವ ಬಗ್ಗೆ ದಾಖಲೆ ಸಮೇತ ಬಿಡುಗಡೆ ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಬಿಜೆಪಿ ಮುಖಂಡ ಈಶ್ವರಪ್ಪರವರಿಗೆ ಮಾಜಿ ಸಚಿವ ಎಚ್.ಡಿ.ರೇವಣ್ಣನವರು ಬಹಿರಂಗ ಸವಾಲು ಹಾಕಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ನಾನು ಭ್ರಷ್ಟಚಾರ ಮಾಡಿರು ವುದಾಗಿ ಈಶ್ವರಪ್ಪನವರು ಮಾತನಾಡಿದ್ದಾರೆ. ಯಡಿಯೂರಪ್ಪನವರ ಸರಕಾರದಲ್ಲಿ ನಡೆದಿರುವ ಭ್ರಷ್ಟಚಾರದ ಬಗ್ಗೆ ನಾನು ಒಂದೊಂದಾಗಿ ದಾಖಲೆ ಬಿಚ್ಚಿಡುತ್ತೇನೆ. ಸಮಯ ಬಂದಾಗ ಹೇಳುತ್ತೇನೆ. 12 ತಿಂಗಳಲ್ಲಿ ಏನೆನು ಕೆಲಸ ಮಾಡಿದ್ದಾರೆ ನಾಚಿಕೆಯಾಗಬೇಕು. ಒಂದೊಂದು ಅಧಿಕಾರಿಗಳ ವರ್ಗವಣೆಗೆ ಎಷ್ಟೆಷ್ಟು ಹಣ ಪಡೆದಿದ್ದಾರೆ ಗೊತ್ತು, ವಿಧಾನಸಭೆಗೆ ಕರೆಯಲಿ ದಾಖಲೆ ಸಮೇತ ಭ್ರಷ್ಟಚಾರದ ಬಗ್ಗೆ ಎಳೆ ಎಳೆಯಾಗಿ ತಿಳಿಸುವೆ ಎಂದು ತಿಳಿಸಿದರು.

ಇಂತಹ ಹೇಳಿಕೆ ಕೊಡುವ ಮೊದಲು ನಿಮ್ಮ ನಾಲಿಗೆಯನ್ನು ಹಿಡಿತದಲ್ಲಿ ಇಟ್ಟು ಕೊಳ್ಳಬೇಕು. ಈಶ್ವರಪ್ಪನವರಿಗೆ ಗೌರವ ಇದ್ದರೆ ದಾಖಲೆ ಸಮೇತ ಹೇಳಿಕೆ ಕೊಡಬೇಕು. ಜೀವನದಲ್ಲಿ ವರ್ಗಾವಣೆಗೆ ಎಚ್.‌ಡಿ. ರೇವಣ್ಣ ಹಣ ಪಡೆದಿರುವುದಾಗಿ ಹೇಳಿದರೇ ಇವತ್ತೆ ರಾಜಕೀಯಕ್ಕೆ ರಾಜೀನಾಮೆ ನೀಡುತ್ತೇನೆ ಎಂದು  ನುಡಿದ ಅವರು ನನ್ನ ಸವಾಲಿಗೆ ಈಶ್ವರಪ್ಪನವರು ಸಿದ್ಧರಾರಿದ್ದಾರಾ ತಿಳಿಸಿ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದು ಒಂದು ವರ್ಷ ಕಳೆದಿದೆ. ವಿಧಾನಸಭೆಯಲ್ಲಿ ಸಿಎಂ ಕುರಿತು ನಾನು ಯಾವ ದ್ವೇಷದ ರಾಜಕಾರಣ ಮಾಡುವುದಿಲ್ಲ, ಎಲ್ಲರನ್ನು ಸಮನಾಗಿ ಕಂಡು ಎಲ್ಲ ಅಭಿವೃದ್ಧಿ ಕೆಲಸ ಮಾಡುವುದಾಗಿ ಹೇಳಿದ್ದರು. ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಅವಧಿ ನೋಡಿದರೆ ಇನ್ನು ದ್ವೇಷದ ರಾಜಕಾರಣ ಬಿಟ್ಟಿಲ್ಲದಂತೆ ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News