ಶಿಕ್ಷಕರ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ: ಸಂಘದ ಕಾರ್ಯದರ್ಶಿಗೆ ನ್ಯಾಯಾಂಗ ಬಂಧನ

Update: 2020-07-29 18:22 GMT

ಕಲಬುರ್ಗಿ, ಜು.29: ಕಲಬುರ್ಗಿ ನಗರದ ಶಿಕ್ಷಕರ ಪತ್ತಿನ ಸಹಕಾರ ಸಂಘದಲ್ಲಿ 3 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಂಘದ ಕಾರ್ಯದರ್ಶಿ ವೀರಭದ್ರಯ್ಯ ಟೆಂಗಳಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸಂಘದ ಅಧ್ಯಕ್ಷರಿಂದ ಚೆಕ್‍ಗಳ ಮೇಲೆ ಸಹಿ ಹಾಕಿಸಿಕೊಂಡು ಹಣವನ್ನು ಬ್ಯಾಂಕ್‍ನಿಂದ ಡ್ರಾ ಮಾಡಿಕೊಂಡು ಸ್ವಂತಕ್ಕೆ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಘದ ಕಾರ್ಯದರ್ಶಿ ವೀರಭದ್ರಯ್ಯ, ಕ್ಯಾಷಿಯರ್ ಜಗದೀಶ್ ದಂಡಪ್ಪಗೊಳ, ಗುಮಾಸ್ತ ಸಂತೋಷಕುಮಾರ ಕಾಮನಹಳ್ಳಿ, ಲೆಕ್ಕಿಗ ಸುನಿಲಕುಮಾರ್, ಹಿಂದಿನ ಅಧ್ಯಕ್ಷರಾದ ಶಂಕರ ಪವಾರ, ದಾದಾಸಾಹೇಬ ಹೊಸೂರ ಹಾಗೂ ಮಹಾದೇವಪ್ಪ ನಂದ್ಯಾಳ ಅವರ ವಿರುದ್ಧ ಸಂಘದ ಹಾಲಿ ಅಧ್ಯಕ್ಷ ಮಹೇಶ ಹೂಗಾರ ಪ್ರಕರಣ ದಾಖಲಿಸಿದ್ದರು.

ವೀರಭದ್ರಯ್ಯ ಅವರನ್ನು ಸಿಇಎನ್ ವಿಶೇಷ ಅಪರಾಧ ಠಾಣೆ ಪೊಲೀಸರು ಬಂಧಿಸಿ, 1ನೆ ಹೆಚ್ಚುವರಿ ಸಿ.ಜೆ ಹಾಗೂ ಜೆಎಂಎಫ್ ಕೋರ್ಟ್ ಮುಂದೆ ಹಾಜರುಪಡಿಸಿದರು. ನ್ಯಾಯಪೀಠವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಉಳಿದ ಆರೋಪಿಗಳ ಹುಡುಕಾಟ ಮುಂದುವರೆದಿದೆ.       

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News