ಸ್ವಾತಂತ್ರ್ಯ ಹೋರಾಟಗಾರರ ಪಠ್ಯ ಕೈಬಿಡುವ ನಿರ್ಧಾರ ಖಂಡನೀಯ: ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್
ಮಂಗಳೂರು, ಜು.30: ಕರ್ನಾಟಕ ಸರಕಾರ ಕೊರೋನ ಕಾರಣದಿಂದ ಮುಚ್ಚಿರುವ ಶಾಲೆಗಳಿಗೆ ಪರ್ಯಾಯವಾಗಿ ಆರಂಭಿಸಿರುವ ಆನ್'ಲೈನ್ ಶಿಕ್ಷಣದಲ್ಲಿ ಸಿಲೆಬಸ್ ಕಡಿಮೆ ಮಾಡುವ ನೆಪ ಒಡ್ಡಿ ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ತೆಗೆದು ಹಾಕಿರುವ ಕ್ರಮ ಖಂಡನೀಯ ಎಂದು ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ಕರ್ನಾಟಕ ರಾಜ್ಯ ಸಮಿತಿಯೂ ತಿಳಿಸಿದೆ.
ಸರ್ವರಿಗೂ ಸಮಬಾಳು ಸಮಪಾಲು ಎಂದು ಆಡಳಿತ ನಡೆಸಿರುವ ಟಿಪ್ಪು ಸುಲ್ತಾನರ ಆಡಳಿತ ಸಮಯದಲ್ಲಿ ಹಿಂದುಳಿದ ವರ್ಗದವರು, ನ್ಯಾಯ ನಿರಾಕರಿಸಲ್ಪಟ್ಟವರು, ಶೋಷಿತರು, ಮೇಲ್ವರ್ಗ, ಕೆಳವರ್ಗ, ಧರ್ಮ, ಜಾತಿ ಎಂಬ ವ್ಯತ್ಯಾಸವಿಲ್ಲದೇ ಎಲ್ಲರೂ ನ್ಯಾಯುತವಾಗಿ ಭಯಮುಕ್ತರಾಗಿ ಜೀವಿಸಿದರು ಎಂಬುವುದಕ್ಕೆ ಚರಿತ್ರೆಯೇ ಸಾಕ್ಷಿ. ಆದರೆ ಕೆಲವರ ಕೋಮು ದ್ರುವೀಕರಣ ರಾಜಕೀಯಕ್ಕಾಗಿ ಟಿಪ್ಪು ಸುಲ್ತಾನರ ಚರಿತ್ರೆಯನ್ನು ತಿರುಚಿ ಜನರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಪ್ಪು ಸಂದೇಶ ನೀಡುತ್ತಿರುವುದು ಖಂಡನೀಯ ಎಂದು ತಿಳಿಸಿದೆ.
ಸ್ವಾಭಿಮಾನ, ಧೀರತೆಯಿಂದಲೇ ಹೋರಾಡುತ್ತಾ ವೀರ ಮರಣ ಹೊಂದಿದ ಟಿಪ್ಪು ಸುಲ್ತಾನರ ದೇಶಪ್ರೇಮದ ಬಗ್ಗೆ ಬೆಳೆದು ಬರುವ ಮಕ್ಕಳಿಗೆ ತಿಳಿಸಿಕೊಡುವುದು ಅವಶ್ಯಕ. ಶಿಕ್ಷಣವನ್ನು ಕೇಸರೀಕರಣ ಮಾಡುವ ಸಲುವಾಗಿ ಚರಿತ್ರೆಯನ್ನು ತಿರುಚುವ ಕೆಲವೊಂದು ದುಷ್ಟ ಶಕ್ತಿಗಳಿಗೆ ಸರಕಾರ ಬಲಿಯಾಗಿರುವುದು ದುರದೃಷ್ಟಕರ. ಹೀಗಾಗಿ ಸ್ವಾತಂತ್ರ್ಯ ಹೋರಾಟಗಾರರಾದ ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ, ಝಾನ್ಸೀ ರಾಣಿ ಲಕ್ಷ್ಮೀಬಾಯಿ ಮುಂತಾದವರ ಹೆಸರನ್ನು ಪಠ್ಯಪುಸ್ತಕದಿಂದ ಕೈಬಿಡುವ ನಿರ್ಧಾರವನ್ನು ಹಿಂಪಡೆಯಬೇಕೆಂದು ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ಕರ್ನಾಟಕ ರಾಜ್ಯ ಸಮಿತಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.