ಶಿವಮೊಗ್ಗ: ಹಣಕ್ಕಾಗಿ 15 ದಿನದ ಮಗು ಮಾರಾಟಕ್ಕೆ ಯತ್ನ; ನಾಲ್ವರ ಬಂಧನ

Update: 2020-07-30 10:59 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಜು.30: ಹದಿನೈದು ದಿನದ ಗಂಡು ಮಗುವನ್ನು ಹಣಕ್ಕಾಗಿ ಮಾರಾಟ ಮಾಡಲು ಸಿದ್ಧವಾಗಿದ್ದ ತಂಡವನ್ನು ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ ಬಂಧಿಸಿದ್ದಾರೆ.

ಟಿಪ್ಪು ನಗರದ ನಿವಾಸವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು, ಮಗು ಮಾರಾಟದ ದಂಧೆ ನಡೆಸುತ್ತಿದ್ದವರನ್ನು ಬಂಧಿಸಿದ್ದಾರೆ. ಟಿಪ್ಪು ನಗರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆಯೋರ್ವಳು ತನ್ನ ನಿವಾಸದಲ್ಲಿ ಸ್ಥಳೀಯ ಮಹಿಳೆಯ ಸಹಾಯದೊಂದಿಗೆ 15 ದಿನದ ಮಗುವನ್ನು ಮಾರಾಟ ಮಾಡಲು ಸಿದ್ಧವಾಗಿದ್ದಳು ಎನ್ನಲಾಗಿದೆ. ಈ ವೇಳೆ ಮಹಿಳೆಯ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು, ಈ ಕೃತ್ಯದಲ್ಲಿ ತೊಡಗಿದ್ದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಶೈಲ, ಸುಮ, ತುಳಸಿ ಹಾಗೂ ಷಣ್ಮುಖ ಬಂಧಿತರು. ಈ ಮಗು ಸುಮ ಸಂಬಂಧಿಕರಿಗೆ ಸೇರಿದ್ದಾಗಿದೆ ಎಂದು ಹೇಳಲಾಗುತ್ತಿದೆ. 1 ಲಕ್ಷದ 50 ಸಾವಿರಕ್ಕೆ ಮಗುವನ್ನು ಮಾರಾಟ ಮಾಡಲು ಮಾತುಕತೆ ನಡೆದಿದ್ದು, ಓರ್ವ ವ್ಯಕ್ತಿ ಖರೀದಿ ಮಾಡಲು ಸಹ ಸಿದ್ಧವಾಗಿದ್ದ ಎನ್ನಲಾಗಿದೆ. ಬಡತನ ಹಾಗೂ ಮಗುವಿನ ತಾಯಿ ಮಾನಸಿಕ ಅಸ್ವಸ್ಥೆಯಾಗಿರುವ ಕಾರಣದಿಂದಾಗಿ ಮಗು ಸಾಕಲು ಆಗದೇ ಮಾರಾಟಕ್ಕೆ ಮುಂದಾಗಿರುವುದಾಗಿ ವಿಚಾರಣೆ ವೇಳೆ ಮಗುವಿನ ಕುಟುಂಬಸ್ಥರು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.

ಆದರೆ ಈ ಹಿಂದೆ ಸಹ ಇದೇ ರೀತಿ ಶೈಲ ನೇತೃತ್ವದಲ್ಲಿ ಎರಡು ಮಕ್ಕಳ ಮಾರಾಟ ಮಾಡಲಾಗಿದೆ ಎಂಬ ಆರೋಪ ಸಹ ಕೇಳಿ ಬಂದಿದೆ. ಸದ್ಯ ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು, ಮೂವರು ಮಹಿಳೆಯರು ಹಾಗೂ ಮಗುವನ್ನು ಸುರಭಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದಾರೆ. 

ದಾಳಿ ವೇಳೆ ಮಕ್ಕಳ ಸಹಾಯವಾಣಿ ಕೇಂದ್ರದ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News