ಚಿಕಿತ್ಸೆ ಸಿಗದೆ ರೋಗಿ ಮೃತ್ಯು: ಕಲಬುರಗಿ ಡಿಸಿ ಕಚೇರಿಗೆ ಆಟೋದಲ್ಲಿ ಮೃತದೇಹ ತಂದ ಸಂಬಂಧಿಕರು

Update: 2020-07-30 16:05 GMT

ಕಲಬುರಗಿ, ಜು.30: ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿ, ಆಸ್ಪತ್ರೆಗೆ ಸೇರಿಸಲು ಅಲೆದಾಡುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿಯೇ ರೋಗಿ ಸಾವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ ಇಂದು ನಡೆದಿದ್ದು, ಕುಟುಂಬಸ್ಥರು ಆಟೋದಲ್ಲಿ ಮೃತ ವ್ಯಕ್ತಿಯ ಶವವನ್ನು ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ತಂದು ಚಿಕಿತ್ಸೆಗೆ ನಿರಾಕರಿಸಿದ ಸಿಬ್ಬಂದಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ನಗರದ ಅಕ್ಬರ ಬಾಗ್ ಕಾಲನಿಯ ನಿವಾಸಿ ಮುಹಮ್ಮದ್ ಅಯೂಬ್ (38) ಮೃತ ವ್ಯಕ್ತಿ.

ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆ ಅಯೂಬ್ ಅವರನ್ನು ನಗರದ ಆಸ್ಪತ್ರೆಗೆ ಕರೆ ತರಲಾಗಿತ್ತು. ಕೊರೋನ ನೆಗೆಟಿವ್ ವರದಿ ಬಂದರೂ ಸಹ ರೋಗಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಿಲ್ಲ. ಬಳಿಕ ಮೂರ್ನಾಲ್ಕು ಆಸ್ಪತ್ರೆಗಳನ್ನು ಸುತ್ತುವಷ್ಟರಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಯೂಬ್ ಸಹೋದರ ಆರೋಪಿಸಿದ್ದಾರೆ.

ತಾವೇ ಸ್ಟ್ರೆಚರ್ ನಲ್ಲಿ ಕೊಂಡೊಯ್ದರೂ ಸಹ ಚಿಕಿತ್ಸೆ ನೀಡಲಿಲ್ಲ. ಎಲ್ಲಾ ಆಸ್ಪತ್ರೆಯಲ್ಲೂ ಬೆಡ್ ಫುಲ್ ಆಗಿವೆ ಎಂದು ಹೇಳುತ್ತಾರೆ ಎಂದು ಆರೋಪಿಸಿದ ಅಯೂಬ್ ಅವರ ಸಹೋದರ, ಬಳಿಕ ಅರ್ಧ ಗಂಟೆ ಜಿಲ್ಲಾಧಿಕಾರಿ ಕಚೇರಿ ಬಳಿಯೇ ಶವ ಇಟ್ಟುಕೊಂಡು ನಂತರ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಇತ್ತೀಚೆಗಷ್ಟೇ ವಾಡಿ ಪಟ್ಟಣದ ಮಹಿಳೆ ವೆಂಟಿಲೇಟರ್ ಸಿಗದೆ ಸಾವನಪ್ಪಿದ್ದು, ಈವರೆಗೆ ಆರು ಜನ ಕೋವಿಡೇತರ ರೋಗಿಗಳು ಇದೇ ರೀತಿ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News