ರಫೆಲ್‍ಗಿಂತ ಹೆಚ್ಚಿನ ಸಾಮರ್ಥ್ಯ ಸುಖೋಯ್‍ಗಿದೆ: ಮಾಜಿ ಪ್ರಧಾನಿ ದೇವೇಗೌಡ

Update: 2020-07-30 16:55 GMT

ಬೆಂಗಳೂರು, ಜು. 30: `ದೇಶದ ವಾಯುಪಡೆಗೆ 5 ರಫೆಲ್ ಯುದ್ಧ ವಿಮಾನಗಳು ಸೇರಿವೆ. ಇದು ಖುಷಿ ಹಾಗೂ ಹೆಮ್ಮೆಯ ವಿಚಾರ. ಆದರೆ ಸ್ವಲ್ಪ ಆಲೋಚಿಸಿ ತಿಳಿಯಬೇಕಾದದ್ದು ಇನ್ನೂ ಇದೆ. ಆ ಐದು ಯುದ್ಧವಿಮಾನಗಳ ಬೆಂಗಾವಲಿಗೆ ಹೋಗಿದ್ದು ಎರಡು ಸುಖೋಯ್-30 ಯುದ್ಧ ವಿಮಾನಗಳು. ಇದೇ ಸಾಕು ಸುಖೋಯ್ ಶಕ್ತಿ- ಸಾಮರ್ಥ್ಯ ಅಳೆಯಲು' ಎಂದು ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.

'ಒಬ್ಬ ಪ್ರಧಾನಿಗೆ 10 ಜನ ಅಂಗರಕ್ಷಕರು ಇರುವ ಈ ಕಾಲದಲ್ಲಿ ಐದು ಆಧುನಿಕ ವಿಮಾನಗಳಿಗೆ ಎರಡು ವಿಮಾನಗಳು ಬೆಂಗಾವಲು ಸಾಕು ಎಂದರೆ ರಫೆಲ್‍ಗಿಂತ ಹೆಚ್ಚಿನ ಸಾಮರ್ಥ್ಯ ಸುಖೋಯ್‍ಗಿದೆ ಎಂದರ್ಥ. ಇದರ ಮೂಲ ಹುಡುಕುತ್ತ ಹೋದಾಗ ಗೊತ್ತಾದ ಸತ್ಯವೊಂದು ಕೇವಲ ಕನ್ನಡಿಗರಷ್ಟೇ ಅಲ್ಲದೆ ಇಡೀ ಭಾರತವೇ ಹೆಮ್ಮೆಪಡುವ ವಿಷಯ' ಇದು ಎಂದು ತಿಳಿಸಲಾಗಿದೆ.

'ಸುಖೋಯ್ ಎಂಬ ಸಶಕ್ತ ಹಾಗೂ ಅತ್ಯಾಧುನಿಕ ಯುದ್ಧ ವಿಮಾನವನ್ನು ಭಾರತ ವಾಯುಸೇನೆಗೆ ಖರೀದಿಸಿದ್ದು ನಾನು ಪ್ರಧಾನಿಯಾಗಿದ್ದ ಅವಧಿಯಲ್ಲಿ. ನಮ್ಮ ಶ್ರೇಷ್ಟತೆಯನ್ನು ಮರೆತು ನಮ್ಮನ್ನೇ ತೆಗಳಿ ಪರರಾಜ್ಯದ ಭಕ್ತರಾದರೆ ದೊಡ್ಡ ದೇಶಭಕ್ತನೆಂಬ ಪಟ್ಟಕ್ಕಾಗಿ ಸ್ವಂತಿಕೆಯನ್ನು ಮರೆತವರಿಗೆ ಇದು ತಿಳಿಯಬೇಕಿದೆ' ಎಂದು ದೇವೇಗೌಡ ಅವರ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News