ಅಗ್ರಹಾರ ಕೃಷ್ಣಮೂರ್ತಿ ನಿವೃತ್ತಿ ಸೌಲಭ್ಯಕ್ಕೆ ಒತ್ತಾಯಿಸಿ ಕಂಬಾರ ಅವರಿಗೆ ಸಾಹಿತಿ-ಚಿಂತಕರ ಮನವಿ

Update: 2020-07-30 18:19 GMT

ಬೆಂಗಳೂರು, ಜು.30: ಕೇಂದ್ರ ಸಾಹಿತ್ಯ ಅಕಾಡಮಿಯ ಕಾರ್ಯದರ್ಶಿಯಾಗಿದ್ದ ಅಗ್ರಹಾರ ಕೃಷ್ಣಮೂರ್ತಿ ಅವರ ನಿವೃತ್ತಿ ಸೌಲಭ್ಯಗಳನ್ನು ತಡೆ ಹಿಡಿದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಈಗಾಗಲೇ ಅವರ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದ್ದು, ಈ ಕೂಡಲೇ ಅವರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿ ಕನ್ನಡದ ಸಾಹಿತಿಗಳು, ಹೋರಾಟಗಾರರು ಹಾಗೂ ಚಿಂತಕರು ಹೊಸದಿಲ್ಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕೃಷ್ಣಮೂರ್ತಿ ಅವರ ವಿರುದ್ಧ ಮಾಡಲಾಗಿದ್ದ ಆರೋಪಗಳನ್ನು ಕರ್ನಾಟಕ ಹೈಕೋರ್ಟ್ ತಳ್ಳಿ ಹಾಕಿದ ಬಳಿಕ ಅವರಿಗೆ ನಿವೃತ್ತಿ ಸೌಲಭ್ಯಗಳನ್ನು ನೀಡಬೇಕಾಗಿತ್ತು. ಆದರೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಾಡಿನ ಹಿರಿಯ ಕನ್ನಡಿಗರೂ ಆದ ಡಾ.ಚಂದ್ರಶೇಖರ ಕಂಬಾರ ಅವರು ಕೇಂದ್ರ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿರುವ ಈ ಸಂದರ್ಭದಲ್ಲೇ ಕೃಷ್ಣಮೂರ್ತಿ ಅವರ ವಿರುದ್ಧ ಮತ್ತೆ ಮೇಲ್ಮನವಿ ಸಲ್ಲಿಸುವ ಸನ್ನಿವೇಶ ಬರಬಾರದಾಗಿತ್ತು. ಆದರೂ ಬಂದಿದೆ. ಇದೀಗ ಕಂಬಾರರು ಹಾಗೂ ಅವರ ಸದಸ್ಯ ವರ್ಗ ಮೇಲ್ಮನವಿ ಸಲ್ಲಿಸಿರುವ ವಿಷಯದ ಬಗ್ಗೆ ಮಾನವೀಯತೆಯ ಹಿನ್ನೆಲೆಯಲ್ಲಿ ಸತ್ಯ ಸಂಗತಿಗಳ ಮುನ್ನೆಲೆಯಲ್ಲಿ ಸರದಿ ಮೇಲ್ಮನವಿಯನ್ನು ಹಿಂಪಡೆದು ಕೃಷ್ಣಮೂರ್ತಿ ಅವರಿಗೆ ಸಲ್ಲಬೇಕಾದ ಎಲ್ಲ ಸೌಲಭ್ಯಗಳನ್ನು ಕೊಡಬೇಕೆಂದು ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಕೆ.ಮರುಳಸಿದ್ದಪ್ಪ, ಡಾ.ಎಲ್.ಹನುಮಂತಯ್ಯ, ಡಾ.ವಿಜಯಮ್ಮ, ಎಚ್.ಎಸ್.ಶಿವಪ್ರಕಾಶ್, ಕಾಳೇಗೌಡ ನಾಗಾವರ, ಡಾ.ರಾಜೇಂದ್ರ ಚನ್ನಿ, ಸಿ.ಎಸ್.ದ್ವಾರಕಾನಾಥ್, ಬಿ.ಟಿ.ವೆಂಕಟೇಶ್, ಕೇಶವರೆಡ್ಡಿ ಹಂದ್ರಾಳ, ಎಚ್.ಆರ್.ಸ್ವಾಮಿ, ಕುಂ.ವೀರಭದ್ರಪ್ಪ, ಪುರುಷೋತ್ತಮ್ ಬಿಳಿಮಲೆ, ಎಂ.ಎಸ್.ಆಶಾದೇವಿ, ಸಿ.ಬಸವಲಿಂಗಯ್ಯ, ಕವಿತಾ ಲಂಕೇಶ್, ಕೆ.ನೀಲಾ, ಎಲ್.ಎನ್.ಮುಕುಂದರಾಜ್, ಶ್ರೀನಿವಾಸ್ ಜಿ ಕಪ್ಪಣ್ಣ, ಷರೀಫಾ, ದಿನೇಶ್ ಅಮೀನ್‍ಮಟ್ಟು, ಡಿ.ಉಮಾಪತಿ, ಎಸ್.ಎಚ್.ರೆಡ್ಡಿ, ಬಸವರಾಜು ಅವರು ಕನ್ನಡದ ಲೇಖಕ ಚಿಂತಕ ಅಗ್ರಹಾರ ಕೃಷ್ಣಮೂರ್ತಿ ಪರ ನ್ಯಾಯಕ್ಕಾಗಿ ನಾವು ಎಂಬ ಲೆಟರ್ ಹೆಡ್‍ನಲ್ಲಿ ಸಹಿ ಮಾಡುವ ಮೂಲಕ ಚಂದ್ರಶೇಖರ್ ಕಂಬಾರ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡಮಿ ಅಗ್ರಹಾರ ಕೃಷ್ಣಮೂರ್ತಿ ಅವರ ಮೇಲೆ ಹೊರಿಸಿದ್ದ ಆರೋಪಗಳ ವಿಚಾರವಾಗಿ ಅವರು ಏಳು ವರ್ಷಗಳ ಕಾಲ ಮಾನಸಿಕ ನೋವು ಅನುಭವಿಸಿದರು. ಇದರಿಂದ, ಅವರ ಆರೋಗ್ಯ ಕೆಟ್ಟು ದೈಹಿಕವಾಗಿ ಜರ್ಜರಿತರಾಗಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಅವರ ಮೇಲಿದ್ದ ಆರೋಪಗಳ ಕಾರಣ ನಿವೃತ್ತಿಯ ನಂತರ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಸ್ವಾಯತ್ತ ಸಂಸ್ಥೆಗಳಲ್ಲಿ ತಮ್ಮ ಸೇವೆ ಮುಂದುವರೆಸಬಹುದಾದ ಬಹುದೊಡ್ಡ ಅವಕಾಶಗಳಿಂದಲೂ ವಂಚಿತರಾದರು. ಜೊತೆಗೆ ಅಗ್ರಹಾರ ಅವರಿಗೆ ಹೈಕೋರ್ಟ್ ನೀಡಿದ ತೀರ್ಪಿನಿಂದ ಒದಗಿದ ನ್ಯಾಯವೂ ಅವರ ಪಾಲಿಗೆ ಇಲ್ಲವಾಯಿತು.

ಇಂಥ ಅಹಿತಕರ ಘಟನೆಗಳಿಂದ ಕೃಷ್ಣಮೂರ್ತಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚೇತರಿಸಿಕೊಳ್ಳುತ್ತಿದ್ದು, ವಿಶ್ರಾಂತ ಬದುಕಿನಲ್ಲಿ ಇಂಥ ನೋವುಣ್ಣುವ ಪರಿಸ್ಥಿತಿ ಅವರ ಪಾಲಿಗೆ ಬಂದಿರುವುದು ನಮಗೆಲ್ಲಾ ಅತ್ಯಂತ ಖೇದ ಮತ್ತು ದುಃಖದ ವಿಷಯವಾಗಿದೆ ಎಂದು ನಾಡಿದ ಸಾಹಿತಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News