ಕೊರೋನ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧ

Update: 2020-07-31 10:22 GMT


ಶಿವಮೊಗ್ಗ, ಜು.31: ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೋವಿಡ್ ಬೆಡ್‍ಗಳು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಸಜ್ಜುಗೊಳಿಸಿದ್ದು, ಜನರು ಗಾಬರಿಯಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ 27029 ಜನರ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದೆ. 24899 ನೆಗೆಟಿವ್ ವರದಿ ಬಂದಿದ್ದು 1727 ಪಾಸಿಟಿವ್ ಕಂಡು ಬಂದಿದೆ. ಇವರ ಪೈಕಿ 925ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. 771ಮಂದಿ ಮಾತ್ರ ವಿವಿಧ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದ್ದು, ಪ್ರತಿ ದಿನ 950 ಜನರ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದಾಗಿ ಪಾಸಿಟಿವ್ ಪ್ರಕರಣಗಳಲ್ಲಿ ಹೆಚ್ಚಳ ಉಂಟಾಗಿದೆ ಎಂದು ಹೇಳಿದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗ ಲಕ್ಷಣವಿರುವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಸ್ತುತ 233ಮಂದಿ ಇದ್ದಾರೆ. ವಿವಿಧ ಕಡೆಗಳಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ 436ಮಂದಿ ಇದ್ದಾರೆ. ಇನ್ನೂ 550ಬೆಡ್ ಉಪಯೋಗಕ್ಕೆ ಸಿದ್ಧವಾಗಿದ್ದು, ಇನ್ನೂ 400 ಬೆಡ್‍ಗಳು ಸಜ್ಜುಗೊಳಿಸಲಾಗುತ್ತಿದೆ. ಪ್ರಸ್ತುತ 37ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ 300ಬೆಡ್‍ಗಳ ಸೌಲಭ್ಯ ಸಿದ್ಧವಿದೆ ಎಂದರು.
ಪ್ರಸ್ತುತ 28ವೆಂಟಿಲೇಟರ್‍ಗಳು ಮೆಗ್ಗಾನ್‍ನಲ್ಲಿ ಲಭ್ಯವಿದ್ದು, ಇನ್ನೂ 37ವೆಂಟಿಲೇಟರ್‍ಗಳು ಒಂದು ವಾರದ ಒಳಗಾಗಿ ಲಭ್ಯವಾಗಲಿವೆ. ಹೆಚ್ಚುತ್ತಿರುವ ಕರೋನ ಪಾಸಿಟಿವ್ ಪ್ರಕರಣಗಳಿಗೆ ತಕ್ಕಂತೆ ಮೂಲಸೌಲಭ್ಯಗಳನ್ನು ಕೂಡಾ ಹೆಚ್ಚಿಸಲಾಗುತ್ತಿದೆ.
ಹೋಂ ಕ್ವಾರೆಂಟೈನ್:

ರೋಗ ಲಕ್ಷಣವಿಲ್ಲದ ಪಾಸಿಟಿವ್ ವ್ಯಕ್ತಿಗಳಿಗೆ ಮನೆಯಲ್ಲಿ ಐಸೋಲೇಷ್‍ಗೆ ವ್ಯವಸ್ಥೆ ಇದ್ದರೆ ಅನುಮತಿ ನೀಡಲಾಗುತ್ತಿದೆ. ಅಂತಹ ವ್ಯಕ್ತಿಗಳನ್ನು ಆರಂಭದಲ್ಲಿ ಮೆಗ್ಗಾನ್‍ಗೆ ಕರೆ ತಂದು ಎದೆ ಎಕ್ಸ್‍ರೇ, ರಕ್ತ ಪರೀಕ್ಷೆ ಇತ್ಯಾದಿ ಕಡ್ಡಾಯ ತಪಾಸಣೆಗಳನ್ನು ಮಾಡಲಾಗುವುದು. ಆ ಬಳಿಕ ವೈದ್ಯರ ತಂಡ ಮನೆಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದ ಬಳಿಕ ಅಂಬ್ಯುಲೆನ್ಸ್ ಮೂಲಕ ಮನೆಗೆ 24 ಗಂಟೆಯೊಳಗಾಗಿ ಕರೆ ತರಲಾಗುವುದು. ಹೋಂ ಕ್ವಾರೆಂಟೈನ್‍ನಲ್ಲಿರುವವರನ್ನು ತಪಾಸಣೆ ನಡೆಸಲು ಪ್ರಸ್ತುತ ಶಿವಮೊಗ್ಗ ನಗರದಲ್ಲಿ 5 ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ಜನರ ಸಹಕಾರ ಅಗತ್ಯ:

ಜನರು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಜನರ ಸಹಕಾರದಿಂದ ಮಾತ್ರ ಕೊರೋನ ಹರಡುವುದನ್ನು ನಿಯಂತ್ರಿಸಬಹುದಾಗಿದೆ ಎಂದು ಅವರು ಹೇಳಿದರು.
ಸಹಾಯವಾಣಿ: ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಚಿಕಿತ್ಸೆಗಾಗಿ ದಾಖಲಾದವರು ತಮ್ಮ ಸಮಸ್ಯೆ ಅಹವಾಲುಗಳನ್ನು ಸಹಾಯವಾಣಿ ಸಂಖ್ಯೆ 08182-221010, 08182-220082 ಕರೆ ಮಾಡಿ ಸಲ್ಲಿಸಬಹುದಾಗಿದೆ. ಅಹವಾಲುಗಳಿಗೆ ತಕ್ಷಣ ಪ್ರತಿಕ್ರಿಯಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News