ಸಿದ್ದರಾಮಯ್ಯ, ಡಿಕೆಶಿಗೆ ಬಿಜೆಪಿ ಲೀಗಲ್ ನೋಟಿಸ್

Update: 2020-07-31 10:50 GMT

ಬೆಂಗಳೂರು, ಜು.31: ವೈದ್ಯಕೀಯ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಆಧಾರ ರಹಿತ ಆರೋಪ ಮಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿ ಲೀಗಲ್ ನೋಟಿಸ್ ಜಾರಿ ಮಾಡಿದೆ.

ಶುಕ್ರವಾರ ಈ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ವಿಧಾನ ಪರಿಷತ್ತಿನ‌ ಬಿಜೆಪಿ ಸದಸ್ಯ ಎನ್. ರವಿಕುಮಾರ್, ಕಾಂಗ್ರೆಸ್ ನಾಯಕರು ವೈದ್ಯಕೀಯ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಮಾಡಿರುವ ಆರೋಪಗಳು ನಿರಾಧಾರವಾಗಿದ್ದು, ಈ ಆರೋಪಗಳಲ್ಲಿ ಹುರುಳಿಲ್ಲ. ಹಾಗಾಗಿ ಸುಳ್ಳು ಆರೋಪ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಬ್ಬರಿಗೂ ಲೀಗಲ್ ನೋಟಿಸ್ ಜಾರಿ ಮಾಡಿ, 15 ದಿನಗಳಲ್ಲಿ ಉತ್ತರಿಸುವಂತೆ ನೋಟಿಸ್‍ನಲ್ಲಿ ಹೇಳಲಾಗಿದೆ ಎಂದರು.

ರಾಜ್ಯ ಸರಕಾರ 4 ಸಾವಿರ ಕೋಟಿ ರೂ.ಗಳನ್ನು ಕೋವಿಡ್-19 ನಿಯಂತ್ರಣಕ್ಕೆ ವೆಚ್ಚವೇ ಮಾಡಿಲ್ಲ. ಹೀಗಿದ್ದರೂ 2 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಸಿದ್ದರಾಮಯ್ಯ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ ಎಂದು ದೂರಿದರು.

ವೈದ್ಯಕೀಯ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಸರಕಾರ ಎಲ್ಲ ಮಾಹಿತಿ ನೀಡಲು ಸಿದ್ದವಿದೆ. ಆದರೆ, ವಿರೋಧ ಪಕ್ಷದ ನಾಯಕರು ಮಾಹಿತಿಯೇ ಇಲ್ಲದೆ 2 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿ, ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News