ಚಿಕ್ಕಮಗಳೂರು: ಮೊದಲು ಕೊರೋನ ಪಾಸಿಟಿವ್; ಶವಸಂಸ್ಕಾರದ ಬಳಿಕ ಟ್ರೂ ನಾಟ್ ಪರೀಕ್ಷೆಯಲ್ಲಿ ನೆಗೆಟಿವ್ !

Update: 2020-07-31 14:55 GMT

#ಖಾಸಗಿ ಆಸ್ಪತ್ರೆಗಳ ಚಿಕಿತ್ಸೆ ನಿರಾಕರಣೆಯಿಂದ ಮೃತಪಟ್ಟಿದ್ದ ಯುವತಿ: ಆರೋಪ

ಚಿಕ್ಕಮಗಳೂರು, ಜು.31: ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ವಿಕಲಚೇತನ ಯುವತಿಯೊಬ್ಬಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ವರದಿಯಾಗಿದ್ದು, ಮೊದಲು ಮೃತ ಯುವತಿಗೆ ಕೊರೋನ ಪಾಸಿಟಿವ್ ಎಂದು ಹೇಳಿ ಹೆತ್ತವರಿಗೆ ಮೃತದೇಹ ನೀಡದೇ ಶವಸಂಸ್ಕಾರ ಮಾಡಿದ್ದ ಜಿಲ್ಲಾಸ್ಪತ್ರೆ ವೈದ್ಯರು ಇದೀಗ ಯುವತಿಯಲ್ಲಿ ಕೊರೋನ ಪಾಸಿಟಿವ್ ಇರಲಿಲ್ಲ ಎಂಬ ವರದಿ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ನಗರದ ಗೌರಿಕಾಲುವೆಯ , ದೈಹಿಕ ನ್ಯೂನತೆಯ ನಡುವೆಯೂ ಅಂತಿಮ ಬಿಕಾಂ ಓದುತ್ತಿದ್ದ  20 ವರ್ಷದ ಯುವತಿಗೆ  ಕಳೆದ ಜು.24ರಂದು ಶುಕ್ರವಾರ ತೀವ್ರ ಅನಾರೋಗ್ಯ ಕಾಣಿಸಿಕೊಂಡಿತ್ತು. ಕೂಡಲೇ ಪೋಷಕರು ಹಾಗೂ ಆಕೆಯ ಸಹೋದರರು ಆಕೆಯನ್ನು ನಗರದ ಕೆಲ ಆಸ್ಪತ್ರೆಗಳಿಗೆ ಕರೆದೊಯ್ದಿದ್ದು, ಈ ವೇಳೆ ಆಸ್ಪತ್ರೆಗಳ ವೈದ್ಯರು ಕೊರೋನ ಸೋಂಕಿರಬಹುದೆಂದು ಶಂಕಿಸಿ ಸ್ವಾಬ್ ಪರೀಕ್ಷೆ ಮಾಡಿಸುವಂತೆ ಸೂಚಿಸಿದ್ದಾರೆ. ಕೂಡಲೇ ಪೋಷಕರು ನಗರದ ಕೆಆರ್‍ಎಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುವಂತೆ ಕೋರಿದ್ದು, ಅಲ್ಲಿನ ವೈದ್ಯರು ಕೋವಿಡ್ ಪರೀಕ್ಷೆ ಮಾಡಿಸುವಂತೆ ನಗರದ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆಂದು ತಿಳಿದು ಬಂದಿದೆ.

ಈ ವೇಳೆ ಯುವತಿಯ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ಪೋಷಕರು ಯುವತಿಯನ್ನು ಜಿಲ್ಲಾಸ್ಪತ್ರೆಗೆ ಕರೆತಂದಿದ್ದು, ಚಿಕಿತ್ಸೆಗೆ ದಾಖಲಿಸಿದ ಕೆಲವೇ ನಿಮಿಷಗಳಲ್ಲೇ ಯುವತಿ ಕೊನೆಯುಸಿರೆಳೆದಿದ್ದಾಳೆ. ನಂತರ ಯುವತಿಗೆ ಕೊರೋನ ಸೋಂಕಿರಬಹುದೆಂಬ ಶಂಕೆ ಮೇಲೆ ಜಿಲ್ಲಾಸ್ಪತ್ರೆಯ ವೈದ್ಯರು ರ್ಯಾಪಿಡ್ ಆಂಟಿಜೆನ್ ಕಿಟ್ ಮೂಲಕ ಮೃತ ಯುವತಿಯ ಸ್ವಾಬ್ ಪರೀಕ್ಷೆ ಮಾಡಿದ್ದಾರೆ. ಈ ಟೆಸ್ಟ್ ಫಲಿತಾಂಶ ನೋಡಿದ ವೈದ್ಯರು ಯುವತಿಗೆ ಕೊರೋನ ಪಾಸಿಟಿವ್ ಇದೆ ಎಂದು ಪೋಷಕರಿಗೆ ತಿಳಿಸಿದ್ದಲ್ಲದೇ ಯುವತಿಯ ಶವವನ್ನು ಕೋವಿಡ್-19 ಶವ ಸಂಸ್ಕಾರ ಮಾರ್ಗಸೂಚಿಗಳಂತೆ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆಂದು ತಿಳಿದು ಬಂದಿದೆ.

ಯುವತಿಯನ್ನು ಕಳೆದುಕೊಂಡ ಪೋಷಕರು ಹಾಗೂ ಆಕೆಯ ಸಹೋದರರು, ಸಂಬಂಧಿಗಳು, ತಮ್ಮ ಕುಟುಂಬಸ್ಥರಲ್ಲಿ ಯಾರಿಗೂ ಕೊರೋನ ಪಾಸಿಟಿವ್ ಇರದಿದ್ದರೂ ಮಗಳಿಗೆ ಹೇಗೆ ಕೊರೋನ ಬಂದಿದೆ ಎಂದು ತಿಳಿಯದೇ ಗೊಂದಲಕ್ಕೆ ಬಿದ್ದಿದ್ದಾರೆ. ಈ ಗೊಂದಲದಿಂದಾಗಿ ಜಿಲ್ಲಾಸ್ಪತ್ರೆಯ ವೈದ್ಯರನ್ನು ಮತ್ತೆ ಸಂಪರ್ಕಿಸಿದ ಕುಟುಂಬಸ್ಥರು ಪ್ರಯೋಗಾಲಯದಲ್ಲೇ ಯುವತಿಳ ಸ್ವಾಬ್ ಪರೀಕ್ಷೆ ಮಾಡಿಸಿ ವರದಿ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯ ವೈದ್ಯರು ಯುವತಿಯ ಸ್ವಾಬ್ ಅನ್ನು ಮತ್ತೊಮ್ಮೆ ಟ್ರೂ ನಾಟ್ ಪರೀಕ್ಷೆಗೊಳಪಡಿಸಿದ್ದು, ಜು.30ರಂದು ಸಂಜೆ ಯುವತಿಯ ಟ್ರೂ ನಾಟ್ ಪರೀಕ್ಷೆಯ ವರದಿ ಪೋಷಕರ ಕೈಸೇರಿದೆ. ಈ ವರದಿ ನೋಡಿದ ಮೃತ ನಫೀಯಾಳ ಪೋಷಕರು ಬೆಚ್ಚಿಬಿದ್ದಿದ್ದಾರೆ. ಯುವತಿ ಮೃತಪಟ್ಟ ಸಂದರ್ಭದಲ್ಲಿ ಪಾಸಿಟಿವ್ ಇದೆ ಎಂದಿದ್ದ ವೈದ್ಯರು ಹೇಳಿಕೆಗೆ ತದ್ವಿರುದ್ಧವಾಗಿ ಟ್ರೂ ನಾಟ್ ಪರೀಕ್ಷೆಯಲ್ಲಿ ಯುವತಿಯಲ್ಲಿ ನೆಗೆಟಿವ್ ಬಂದಿದೆ. 

ಈ ಘಟನೆಯಿಂದ ಆಕ್ರೋಶಗೊಂಡ ಯುವತಿ ಪೋಷಕರು, ಸಂಬಂಧಿಕರು ಶುಕ್ರವಾರ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಸರ್ಜನ್ ಅವರ ಬಳಿ ಅಳಲು ತೋಡಿಕೊಂಡಿದ್ದು, ಕೊರೋನ ಪರೀಕ್ಷೆಯ ವಿಧಾನಗಳಲ್ಲಿನ ಲೋಪದೋಷಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಅನಾರೋಗ್ಯಕ್ಕೆ ತುತ್ತಾಗಿದ್ದ ತಮ್ಮ ಮಗಳಿಗೆ ಖಾಸಗಿ ಆಸ್ಪತ್ರೆಗಳು ಸಕಾಲದಲ್ಲಿ ಚಿಕಿತ್ಸೆ ನೀಡದಿರುವುದು, ರ್ಯಾಪಿಡ್ ಆಂಟಿಜೆನ್ ಕಿಟ್ ಟೆಸ್ಟ್‍ನಲ್ಲಿನ ದೋಷದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೊರೋನ ಸೋಂಕಿಲ್ಲದಿದ್ದರೂ ಸೋಂಕಿದೆ ಎಂದು ಹೇಳಿ ಲೋಪ ಎಸಗಿದೆ ವೈದ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದು, ಈ ಸಂಬಂಧ ಸೋಮವಾರ ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಸರ್ಜನ್ ತಾಂತ್ರಿಕ ದೋಷಗಳಿಂದಾಗಿ ಇಂತಹ ಘಟನೆ ವರದಿಯಾಗಿದೆ. ಪರಿಶೀಲಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ.

ನನ್ನ ಮಗಳು ವಿಲಚೇತನಳಾಗಿದ್ದು, ಜು.24ರಂದು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಖಾಸಗಿ ಆಸ್ಪತ್ರೆಗೆ ಕರೆತಂದಾಗ ಕೊರೋನ ಪರೀಕ್ಷೆ ಮಾಡಿಸುವಂತೆ ವೈದ್ಯರು ಹೇಳಿದರೇ ಹೊರತು ಚಿಕಿತ್ಸೆ ದಾಖಲಿಸಿಕೊಳ್ಳಲ್ಲ. ಕೊರೋನ ಚಿಕಿತ್ಸೆಗೆ ಸರಕಾರ ಗುರುತಿಸಿರುವ ನಗರದ ಕೆಆರ್‍ಎಸ್ ಆಸ್ಪತ್ರೆಗೆ ಮಗಳನ್ನು ಕರೆದೊಯ್ದಾಗ ಅಲ್ಲಿನ ವೈದ್ಯರೂ ದಾಖಲು ಮಾಡಿಕೊಳ್ಳದೇ ಜಿಲ್ಲಾಸ್ಪತ್ರೆಯಲ್ಲಿ ಕೊರೋನ ಪರೀಕ್ಷೆ ಮಾಡಿಸುವಂತೆ ಸಾಗ ಹಾಕಿದ್ದಾರೆ. ಜಿಲ್ಲಾಸ್ಪತ್ರೆಗೆ ಕರೆತಂದಾಗ ಮೃತಪಟ್ಟಿರುತ್ತಾಳೆ. ಈ ವೇಳೆ ವೈದ್ಯರು ಆಂಟಿಜೆನ್ ಟೆಸ್ಟ್ ಮಾಡಿ ಪಾಸಿಟಿವ್ ಎಂದು ಹೇಳಿ ಮಗಳ ಮುಖ ನೋಡಲೂ ಅವಕಾಶ ನೀಡದೇ ಶವಸಂಸ್ಕಾರ ಮಾಡಿದ್ದಾರೆ. ನಮ್ಮ ಕುಟುಂಬಸ್ಥರ ಪೈಕಿ ಯಾರೂ ಕೊರೋನಕ್ಕೆ ತುತ್ತಾಗಿಲ್ಲ. ಹಾಗಾಗಿ ಮಗಳಿಗೆ ಪಾಸಿಟಿವ್ ಬರಲು ಸಾಧ್ಯವೇ ಇರಲಿಲ್ಲ. ಶಂಕೆ ಮೇಲೆ ನಾವು ಮತ್ತೊಮ್ಮೆ ಸ್ವಾಬ್ ಪರೀಕ್ಷೆ ಮಾಡಲು ಕೇಳಿಕೊಂಡಿದ್ದು, ಜು.30ರಂದು ಟ್ರೂ ನಾಟ್ ಟೆಸ್ಟ್ ಮಾಡಿದ್ದಾರೆ. ವರದಿಯಲ್ಲಿ ನಗೆಟಿವ್ ಬಂದಿದೆ. ವೈದ್ಯರು ಮಾಡುವ ತಪ್ಪಿನಿಂದಾಗಿ ಸೋಂಕು ಇಲ್ಲದವರಿಗೂ ಪಾಸಿಟಿವ್ ಎನ್ನುತ್ತಿದ್ದಾರೆ. ಪಾಸಿಟಿವ್ ಎಂದು ಸುಳ್ಳು ಹೇಳಿ ಮಗಳ ಮುಖವನ್ನೂ ನೋಡಲು ಬಿಡಲಿಲ್ಲ. ವೈದ್ಯರ ಲೋಪದ ವಿರುದ್ಧ ಡಿಸಿಗೆ ದೂರು ನೀಡುತ್ತೇವೆ. ನಮಗಾದ ನೋವು ಮತ್ಯಾರಿಗೂ ಆಗಬಾರದು.
- ಮೃತ ಯುವತಿಯ ತಂದೆ

ಮಗಳಿಗೆ ಪಾಸಿಟಿವ್ ಎಂದು ಹೇಳಿ ಮುಖ ನೋಡಲೂ ಅವಕಾಶ ನೀಡದ ವೈದ್ಯರು ಮಗಳು ಮೃತಳಾದ ಮೂರು ದಿನಗಳ ನಂತರ ಮನೆ ಬಳಿ ಬಂದು ಸೀಲ್‍ಡೌನ್ ಮಾಡಿದ್ದಾರೆ. ಮಗಳಲ್ಲಿ ಪಾಸಿಟಿವ್ ಇದ್ದಿದ್ದರೆ ಅಂದೇ ಸೀಲ್‍ಡೌನ್ ಮಾಡಬೇಕಿತ್ತು. ಮೂರು ದಿನಗಳ ನಂತರ ಸೀಲ್‍ಡೌನ್ ಮಾಡಿ ತಮ್ಮ ತಪ್ಪನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡಿದ್ದಾರೆ. ಈಗ ಮಾಡಿರುವ ಪರೀಕ್ಷೆಯಲ್ಲಿ ಮಗಳಿಗೆ ಕೊರೋನ ಸೋಂಕಿರಲಿಲ್ಲ ಎಂಬುದು ತಿಳಿದು ಬಂದಿದೆ. ಪಾಸಿಟಿವ್ ಎಂದು ಹೇಳಿ ಇಡೀ ಕುಟುಂಬದವರನ್ನು ಗೊಂದಕ್ಕೀಡು ಮಾಡಿದರು. ಅಕ್ಕಪಕ್ಕದವರು ನಮ್ಮನ್ನು ತಾತ್ಸಾರ ಮನೋಭಾವನೆಯಿಂದ ನೋಡುವಂತೆ ಮಾಡಿದ್ದಾರೆ.
- ಮೃತ ಯುವತಿಯ ತಾಯಿ

ಯುವತಿಗೆ ತೀವ್ರ ಅನಾರೋಗ್ಯ ಕಾಣಿಸಿಕೊಂಡಾಗ ಪೋಷಕರು ನಗರದ ಕೆಲ ಆಸ್ಪತ್ರೆಗಳಿಗೆ ಅಲೆದಾಡಿ ಕೊನೆ ಗಳಿಗೆಯಲ್ಲಿ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಯುವತಿಯನ್ನು ವೈದ್ಯರು ತಪಾಸಣೆ ಮಾಡುತ್ತಿದ್ದಂತೆಯೇ ಮೃತಪಟ್ಟಿದ್ದಾರೆ. ಕೂಡಲೇ ರ್ಯಾಪಿಡ್ ಆಂಟಿಜೆನ್ ಕಿಟ್ ಮೂಲಕ ಕೊರೋನ ಪರೀಕ್ಷೆ ಮಾಡಿದ್ದು, ಸೋಂಕಿನ ಲಕ್ಷಣಗಳಿದ್ದ ಹಿನ್ನೆಲೆಯಲ್ಲಿ ಪಾಸಿಟಿವ್ ಎಂದು ತೀರ್ಮಾನಿಸಿ ಕೋವಿಡ್ ಮಾರ್ಗಸೂಚಿಯಂತೆ ಶವಸಂಸ್ಕಾರ ಮಾಡಲಾಗಿದೆ. ಪೋಷಕರು ಮತ್ತೆ ಪರೀಕ್ಷೆ ಮಾಡಲು ಬೇಡಿಕೆ ಸಲ್ಲಿಸಿದ್ದರಿಂದ ಟ್ರೂ ನಾಟ್ ಪರೀಕ್ಷೆ ಮಾಡಿದ್ದು, ಪರೀಕ್ಷೆಯಲ್ಲಿ ನಗೆಟಿವ್ ಬಂದಿದೆ. ಜಿಲ್ಲಾಸ್ಪತ್ರೆಯ ವೈದ್ಯರು ಸಾರ್ವಜನಿಕರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ತಾಂತ್ರಿಕ ಕಾರಣಗಳಿಂದಾಗಿ ಇಂತಹ ಲೋಪ ಆಗಿರಬಹುದು. ಅಲ್ಲದೇ ಯುವತಿ ಪೋಷಕರು ಯುವತಿಯಲ್ಲಿ ತೀವ್ರ ಅನಾರೋಗ್ಯ ಕಾಣಿಸಿಕೊಂಡಾಗಲೇ ಕರೆ ತರಬಹುದಿತ್ತು. ಆದರೆ ಸುಮಾರು 3 ಗಂಟೆಗಳ ಖಾಸಗಿ ಆಸ್ಪತ್ರೆಗಳಿಗೆ ಅಲೆಯುತ್ತಾ ಸಮಯ ವ್ಯರ್ಥ ಮಾಡಿದ್ದಾರೆ.  ಯುವತಿಗೆ ಹೃದಯ ಸಂಬಂಧಿ ಕಾಯಿಲೆ, ಉಸಿರಾಟದ ತೊಂದರೆ ಇರುವುದು ತಪಾಸಣೆ ವೇಳೆ ತಿಳಿದು ಬಂದಿದ್ದು, ಕೊನೆಗಳಿಗೆಯಲ್ಲಿ ಯುವತಿಯನ್ನು ಜಿಲ್ಲಾಸ್ಪತ್ರೆಯನ್ನು ಕರೆತಂದಿದ್ದಾರೆ. ಯುವತಿ ಚಿಕಿತ್ಸೆಗೆ ಮುನ್ನವೇ ಮೃತಪಟ್ಟಿದ್ದಾಳೆ.ಮತ್ತೆ ಇಂತಹ ಘಟನೆಗಳು ಆಗಾದಂತೆ ಕ್ರಮವಹಿಸಲಾಗುವುದು.
- ಡಾ.ಮೋಹನ್‍ ಕುಮಾರ್, ಜಿಲ್ಲಾ ಸರ್ಜನ್
 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News