ಪಿಎಸ್ಸೈ ಕಿರಣ್‍ ಕುಮಾರ್ ಆತ್ಮಹತ್ಯೆ ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಕುಮಾರಸ್ವಾಮಿ ಒತ್ತಾಯ

Update: 2020-08-01 11:41 GMT

ಬೆಂಗಳೂರು, ಆ.1: ಚನ್ನರಾಯಪಟ್ಟಣ ಸಬ್‍ಇನ್‍ಸ್ಪೆಕ್ಟರ್ ಕಿರಣ್‍ ಕುಮಾರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಆದೇಶಿಸುವ ಮೂಲಕ ಕಿರಿಯ ಹಂತದ ಪೊಲೀಸ್ ಅಧಿಕಾರಿಗಳಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಈ ಹಿಂದೆ ಗಣಪತಿ ಭಟ್, ಮಲ್ಲಿಕಾರ್ಜುನ ಬಂಡೆ, ಕಲ್ಲಪ್ಪ ಹಂಡಿಬಾಗ್ ಅವರ ಅಕಾಲಿಕ ಸಾವು ಮತ್ತು ಅನುಪಮಾ ಶೆಣೈರವರ ರಾಜೀನಾಮೆ ವೇಳೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಜ್ಯಾದ್ಯಂತ ಜಾಗಟೆ ಬಾರಿಸಿದ್ದ ಬಿಜೆಪಿ ಈಗ ಮೌನಕ್ಕೆ ಶರಣಾಗಿದೆ ಎಂದು ಕಿಡಿಕಾರಿದ್ದಾರೆ.

ಬೇರೆ ಪಕ್ಷಗಳ ಅಧಿಕಾರವಧಿಯಲ್ಲಿ ಅಧಿಕಾರಿಗಳ ನಿಗೂಢ ಸಾವಿಗೆ ಸರಕಾರವೇ ಕಾರಣವೆಂದು ಬೊಬ್ಬೆ ಹಾಕಿದ್ದ ಬಿಜೆಪಿ, ಪಿಎಸ್‍ಐ ಕಿರಣ್‍ಕುಮಾರ್ ಸೇರಿದಂತೆ ಐಎಎಸ್, ಐಎಫ್‍ಎಸ್ ಅಧಿಕಾರಿಗಳು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸೂಕ್ತವಾಗಿ ತನಿಖೆ ನಡೆಸಬೇಕಾಗಿದ್ದ ಬಿಜೆಪಿ ಸರಕಾರ ನಿರ್ಲಕ್ಷ್ಯ ಹಾಗೂ ಮೌನಕ್ಕೆ ಶರಣಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಪಿಎಸ್ಸೈ ಕಿರಣ್‍ ಕುಮಾರ್ ರವರ ಮೊಬೈಲ್‍ನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಜಪ್ತಿ ಮಾಡಿದ್ದು, ಹಲವು ಶಂಕೆಗಳಿಗೆ ಎಡೆಮಾಡಿಕೊಟ್ಟಿದೆ. ಇವರ ಸಾವಿಗೆ ಆಯಕಟ್ಟಿನ ಜಾಗದಲ್ಲಿ ಕುಳಿತ ಹಿರಿಯ ಪೊಲೀಸ್ ಅಧಿಕಾರಿಗಳ ದೌರ್ಜನ್ಯ ಹಾಗೂ ಬೆದರಿಕೆ ತಂತ್ರವೇ ಕಾರಣ ಎಂಬ ಮಾಹಿತಿ ನನಗಿದೆ ಎಂದು ಅವರು ಹೇಳಿದ್ದಾರೆ.

ಪೊಲೀಸರು ಹಾಗೂ ಹಿರಿಯ ಪೊಲೀಸ್ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಕಾನೂನನ್ನು ರಕ್ಷಣೆ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ಆತ್ಮಾಭಿಮಾನ, ಸ್ವಾಭಿಮಾನಕ್ಕೆ ಧಕ್ಕೆ ತರುವಂತೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡಿದ್ದೆ ಪಿಎಸ್‍ಐ ಆತ್ಮಹತ್ಯೆಗೆ ಕಾರಣವೆಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಲಿ.

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News